ಮಂಗಳೂರು, ಫೆ 25 (DaijiworldNews/SM): ತಲಪಾಡಿ ಟೋಲ್ ಗೇಟ್ ಆರಂಭಗೊಂಡ ದಿನದಿಂದ ಸಾರ್ವಜನಿಕರು ಹತ್ತು ಹಲವು ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ. ಟೋಲ್ ಗೇಟ್ ಆಸುಪಾಸಿನ ಜನತೆಗೆ ತೀವ್ರ ತೊಂದರೆಯಾಗುತ್ತಿದೆ. ಇವುಗಳನ್ನು ಪರಿಹರಿಸಬೇಕೆಂದು ಜಿಲ್ಲಾಧಿಕಾರಿ, ಜನನಾಯಕರಿಗೆ ಎಷ್ಟೇ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಮನವಿ ಸಲ್ಲಿಸಲಾಗಿದೆ. ಸಂಸದ ನಳಿನ್ ಕುಮಾರ್ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
ಟೋಲ್ ಗೇಟ್ ನಲ್ಲಿ ಹಲವಾರು ಸಮಸ್ಯೆಗಳಿದ್ದು ಅದನ್ನು ಕೂಡಲೇ ಪರಿಹರಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು, ಮಂಜೇಶ್ವರದ ಸರ್ವ ಪಕ್ಷಗಳ ನಿಯೋಗ ಭೇಟಿ ಮಾಡಿ ಒತ್ತಾಯಿಸಿದೆ.
ಟೋಲ್ ಗೇಟ್ ನಲ್ಲಿ ಈ ಹಿಂದೆ ಇದ್ದ ಟೋಲ್ ವಿನಾಯಿತಿಯನ್ನು ಮುಂದುವರಿಸಬೇಕು, ತಲಪಾಡಿ ಸಿಟಿ ಬಸ್ಸುಗಳನ್ನು ಟೋಲ್ ಗೇಟ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲೇ ಇಳಿಸಿ ಹೋಗುತ್ತಾರೆ ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಗಳಾಗುತ್ತಿದೆ ಎಂದು ನಿಯೋಗ ಸಮಸ್ಯೆಗಳ ಬಗ್ಗೆ ಸಂಸದರ ಗಮನಕ್ಕೆ ತಂದಿದ್ದಾರೆ.
ಸಮಸ್ಯೆಗಳನ್ನು ಆಲಿಸಿ ಬಳಿಕ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ತಲಪಾಡಿ ಟೋಲ್ ಗೇಟ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಫೆ.29ರಂದು ಮಂಗಳೂರಿನಲ್ಲಿ ತುರ್ತು ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಸಂಸದರನ್ನು ಭೇಟಿಯಾದ ನಿಯೋಗದಲ್ಲಿ ಕಾಸರಗೋಡು ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ರಾಜಕೀಯ ಪಕ್ಷಗಳ ಮುಖಂಡರಾದ ಹರೀಶ್ಚಂದ್ರ ಮಂಜೇಶ್ವರ, ದಯಾಕರ ಮಾಡ ಮತ್ತಿತ್ತರರು ಉಪಸ್ಥಿತರಿದ್ದರು.