ಉಡುಪಿ, ಫೆ 25 (DaijiworldNews/SM): ಅನೇಕ ವರ್ಷಗಳಿಂದ ಮೂಡುಬೆಳ್ಳೆಯ ಗುಡ್ಡೆಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿತ್ತು. ಗ್ರಾಮಸ್ಥರು ಈ ಬಾರಿ ರಸ್ತೆ ಪೂರ್ಣ ಆಗದಿದ್ದಲ್ಲಿ ಪಂಚಾಯತ್ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಮಾಧ್ಯಮದೆದುರು ಹೇಳಿದ್ದರು. ಈ ಕುರಿತಂತೆ ದಾಯ್ಜಿವರ್ಲ್ಡ್ ನಲ್ಲಿ ಸಂಪೂರ್ಣ ವರದಿ ಬಿತ್ತರಗೊಂಡಿತ್ತು. ಇದರ ಪರಿಣಾಮ ಎಚ್ಚೆತ್ತುಕೊಂಡ ಸ್ಥಳೀಯ ಶಾಸಕರು ರಸ್ತೆ ಅಭಿವೃದ್ಧಿಪಡಿಸಲು ಮುಂದಾಗಿದ್ದು, ವರದಿಗೆ ಫಲ ಸಿಕ್ಕಂತಾಗಿದೆ.
ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಪ್ರಕಟವಾದ ವರದಿಯಿಂದಾಗಿ ಎಚ್ಚೆತ್ತು ಇದೀಗ ಮೂಡುಬೆಳ್ಳೆಯ ಗುಡ್ಡಬೆಟ್ಟು ಪರಿಸರದ ಜನರಿಗೆ ರಸ್ತೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಂಗಳವಾರದಂದು ಕಾಪು ಶಾಸಕ ಲಾಲಾಜಿ ಮೆಂಡನ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇಲ್ಲಿನ ಲಯನ್ಸ್ ಭವನದಿಂದ ಅಂಕುದ್ರು ವರೆಗಿನ ರಸ್ತೆಯ ಅಭಿವೃದ್ದಿ ಕೆಲಸಕ್ಕೆ ಮತ್ತು ಕುಂತಳನಗರ ಭಾಗದ ನ್ಯಾನಿ ಮಾರ್ಟಿಸ್ ರವರ ಮನೆವರೆಗೆ ಕಾಂಕ್ರೀಟ್ ರಸ್ತೆಗೆ ಸುಮಾರು ತಲಾ 25 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಲಿರುವ ರಸ್ತೆ ಅಭಿವೃದ್ದಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ವೇಳೆ ದಾಯ್ಜಿವರ್ಲ್ಡ್ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಲಾಲಾಜಿ ಮೆಂಡನ್, ಕಾಪು ವಿಧಾನಸಭಾ ವ್ಯಾಪ್ತಿಯ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಹಲವಾರು ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದೇವೆ. ಈ ಭಾಗದಲ್ಲಿ ಎರಡು ರಸ್ತೆಗಳಿಗೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಮಾಡುತ್ತೇವೆ. ಬೇರೆ ಬೇರೆ ಕಾಮಗಾರಿಗಳಿಗೆ ಸುಮಾರು 2.80 ಕೋಟಿಯ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದೇವೆ. ಇವು ಜನರಿಗೆ ಬೇಡಿಕೆ ಇದ್ದ ರಸ್ತೆಗಳು. ಎಪ್ರಿಲ್ ಮೇ ಒಳಗೆ ಕಾಮಗಾರಿ ಮುಗಿಸುತ್ತೇವೆ ಎಂದರು.
ರಸ್ತೆ ಅಭಿವೃದ್ದಿಯಾಗದಿದ್ದಲ್ಲಿ ಚುನಾವಣೆಗೆ ಬಹಿಷ್ಕಾರ ಹಾಕುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಎಲ್ಲ ಕಾಮಗಾರಿಯನ್ನು ಏಕಕಾಲಕ್ಕೆ ಮಾಡಲಾಗುವುದಿಲ್ಲ. ಈ ಕ್ಷೇತ್ರದ ಉದ್ದ ಅಗಲ ಬಹಳ ಇದೆ. ಒಬ್ಬ ಶಾಸಕನಿಗೆ ವರ್ಷಕ್ಕೆ 2 ಕೋಟಿ ಎಮ್ಎಲ್ಎ ನಿಧಿಯಿಂದ ಸಿಗುತ್ತದೆ. ಅದಲ್ಲದೆ ಇತರ ಇಲಾಖೆಯಿಂದಲೂ ಅನುದಾನಕ್ಕೆ ಪ್ರಸ್ತಾಪಿಸಿದ್ದೇವೆ. ಯಡಿಯೂರಪ್ಪನವರು ನೀಡಿದ ವಿಶೇಷ ಪ್ಯಾಕೇಜ್ನಿಂದಾಗಿ ಈ ಕಾಮಗಾರಿಯನ್ನು ಮಾಡಲು ಸಾಧ್ಯವಾಗಿದೆ. ಮಳೆಗಾಲದೊಳಗಾಗಿ ಈ ಕಾಮಗಾರಿಯನ್ನು ನಡೆಸಿಕೊಡುವ ಭರವಸೆಯನ್ನು ನೀಡಿದ್ದಾರೆ. ಗುಡ್ಡೆಬೆಟ್ಟುವಿನ ಗ್ರಾಮಸ್ಥರು ನನ್ನನ್ನು ಭೇಟಿ ಮಾಡಲು ಬಂದಾಗ ಇದರ ಕುರಿತು ತಿಳಿಸುತ್ತೇನೆ ಎಂದರು.