ವಿಟ್ಲ, ಫೆ 26 (Daijiworld News/MB) : ಅಕ್ರಮವಾಗಿ ಕೂಟ ಸೇರಿ ಜುಗಾರಿ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಎಸ್ ಐ ವಿನೋದ್ ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ 29,200 ನಗದು ಮತ್ತು 4 ಮೊಬೈಲ್ ಸೇರಿದಂತೆ ಒಟ್ಟು 48 ಸಾವಿರ ರೂ. ಸ್ವತ್ತುಗಳು ಹಾಗೂ 5 ಮಂದಿಯನ್ನು ವಶಕ್ಕೆ ಪಡೆದ ಘಟನೆ ಪೆರುವಾಯಿ ಸಮೀಪ ನಡೆದಿದೆ.
ಅಳಿಕೆ ಗ್ರಾಮದ ಮುಳಿಯ ನಿವಾಸಿ ಜಗನ್ನಾಥ ಶೆಟ್ಟಿ ಅವರ ಪುತ್ರ ರಾಕೇಶ್ ಎಂ(26), ಕೇರಳದ ಉಪ್ಪಳ ಗ್ರಾಮದ ಪತ್ತೋಡಿ ನಿವಾಸಿ ಮಮ್ಮಂಞ ಅವರ ಪುತ್ರ ಖಾದರ್(51), ಬಾಯಾರು ಮುಳಿಗದ್ದೆ ನಿವಾಸಿ ನಾರಾಯಣ ಅವರ ಪುತ್ರ ಪದ್ಮನಾಭ(25) ಹಾಗೂ ಪೆರುವಾಯಿ ಕಾನ ನಿವಾಸಿ ಮೂಸ ಬ್ಯಾರಿ ಅವರ ಪುತ್ರ ಹಮೀದ್(39) ಹಾಗೂ ಕಾಸರಗೋಡು ಬೇಕೂರು ಇಬ್ರಾಹಿಂ ಅವರ ಪುತ್ರ ಅಬೂಬಕ್ಕರ್ ಸಿದ್ದೀಕ್(24) ಬಂಧಿತ ಆರೋಪಿಗಳು.
ಪೆರುವಾಯಿ ಗ್ರಾಮದ ಮುಕ್ಡಾಪು ನಿವಾಸಿ ಅಲ್ಬಾರ್ಟ್ ಡಿ ಸೋಜ ಎಂಬಾತ ಪರಾರಿಯಾಗಿದ್ದಾನೆ.
ಪೆರುವಾಯಿ ಗ್ರಾಮದಲ್ಲಿ ರಾಕೇಶ್ ಎಂಬಾತ ನೇತೃತ್ವದಲ್ಲಿ ಈ ಜೂಜು ಅಡ್ಡೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇಲ್ಲಿಗೆ ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಆಟದಲ್ಲಿ ನಿರತನಾಗುತ್ತಿದ್ದರು. ಕಳೆದ ಹಲವಾರು ತಿಂಗಳುಗಳಿಂದ ಈ ಭಾಗದಲ್ಲಿ ಜೂಜು ಅಡ್ಡೆ ನಡೆಯುತ್ತಿತ್ತು. ಇದರಿಂದ ಸಾವಿರಾರು ಹಣ ಸಂಪಾದಿಸುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೆರುವಾಯಿ ಸಮೀಪದ ಮುಕುಡಾಪು ನಿರ್ಜನವಾದ ಸರ್ಕಾರಿ ಪ್ರದೇಶದಲ್ಲಿ ಹಣವಿಟ್ಟು ಜುಗಾರಿ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದಾಗ ಪೊಲೀಸ್ ಸ್ಥಳಕ್ಕೆ ತೆರಳುತ್ತಿದ್ದಂತೆ ಓರ್ವ ಪರಾರಿಯಾಗಿದ್ದು ಸ್ಥಳದಿಂದ ಸುಮಾರು 4 ಮೊಬೈಲ್ ಹಾಗೂ 29,200 ನಗದು ಸೇರಿ 48 ಸಾವಿರದ ಸೊತ್ತು 5 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.