ಉಪ್ಪಿನಂಗಡಿ, ಫೆ 26 (Daijiworld News/MB) : ಮನೆಯೊಳಗೆ ದರೋಡೆ ಮಾಡಲೆಂದು ಚಾವಣಿಯ ಹಂಚು ತೆಗೆದು ಬಂದ ದರೋಡೆಕೋರ ಆ ಮನೆಯಲ್ಲೇ ನಿದ್ದೆ ಮಾಡಿ ಬೆಳಿಗ್ಗೆ ಮನೆಯ ಯಜಮಾನನಿಗೆ ಸಿಕ್ಕಿ ಬಿದ್ದ ಕೂತೂಹಲಕಾರಿ ಘಟನೆ ಉಪ್ಪಿನಂಗಡಿ ಪೇಟೆಯಲ್ಲಿ ಮಂಗಳವಾರ ನಡೆದಿದೆ.
ಈ ದರೋಡೆ ಯತ್ನ ಉದ್ಯಮಿ ಸುದರ್ಶನ್ ಎಂಬವರ ಮನೆಯಲ್ಲಿ ನಡೆದಿದ್ದು ಸುಮಾರು 24 ಅಡಿ ಎತ್ತರದ ಮಾಳಿಗೆ ಮನೆಯ ಚಾವಣಿಯನ್ನು ಏರಿದ ದರೋಡೆಕೋರ ಹಂಚುಗಳನ್ನು ತೆಗೆದು ನೆಲ ಮಹಡಿಗೆ ಬಂದಿದ್ದ. ಅಲ್ಲಿಂದ ನಡುವಿನ ಕೋಣೆಯಲ್ಲಿದ್ದ ದಿವಾನದಲ್ಲಿ ನಿದ್ದೆಗೆ ಜಾರಿದ್ದಾನೆ. ಮುಂಜಾನೆ 6 ಗಂಟೆ ಸುಮಾರಿಗೆ ಮನೆಯ ಯಜಮಾನನು ಎಚ್ಚರ ಗೊಂಡಿದ್ದು ಆತನಿಗೆ ಬೆತ್ತದೇಟು ನೀಡಿದಾಗಲೇ ಆತ ಎಚ್ಚರವಾಗಿದ್ದಾನೆ. ಆತನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.
ಬಂಧಿತನನ್ನು ಬಿಹಾರದ ಮಜಿಪುರ್ ಜಿಲ್ಲೆಯ ಬುಡಿ ನಗರ್ ಜಗನಾಥ್ ತಾಲ್ಲೂಕಿನ ಡೊಂಬುಡಿ ಪಂಚಾಯತ್ನ ಅನಿಲ್ ಸಹಾನಿ (34) ಎಂದು ಗುರುತಿಸಲಾಗಿದೆ.
ಇನ್ನು ಉದ್ಯಮಿ ಸುದರ್ಶನ್ ಅಪಾರ ದೈವ ಭಕ್ತರಾಗಿದ್ದು ಅವರ ಮನೆಯಲ್ಲಿ ದೈವದ ಆರಾಧನೆ ನಿರಂತರವಾಗಿ ನಡೆಯುತ್ತದೆ. ದರೋಡೆಕೋರ ನಿದ್ದೆಗೆ ಜಾರಲು ಈ ದೈವವೇ ಕಾರಣ ಎಂದು ಸುದರ್ಶನ್ ಅವರ ನಂಬಿಕೆ.
ಸೋಮವಾರ ರಾತ್ರಿ 12:30 ಸುಮಾರಿಗೆ ಮನೆಯ ಬಾಗಿಲುಗಳನ್ನು ಭದ್ರವಾಗಿ ಹಾಕಿದ ಸುದರ್ಶನ್ ಅವರು ಬೆಡ್ರೂಂನಲ್ಲಿ ನಿದ್ರೆ ಮಾಡಿದ್ದರು. ಮುಂಜಾನೆ ಎದ್ದು ಹೊರ ಬಂದಾಗ ತನ್ನ ಮನೆಯ ನಡು ಕೋಣೆಯಲ್ಲಿ ಅಪರಿಚಿತ ವ್ಯಕ್ತಿ ನಿದ್ರೆ ಮಾಡುತ್ತಿರುವುದನ್ನು ನೋಡಿ ಭಯಗೊಂಡಿದ್ದಾರೆ.
ಎಲ್ಲಾ ಗೋಡೆಗಳನ್ನು ಭದ್ರ ಮಾಡಿದ್ದರೂ ಈ ವ್ಯಕ್ತಿ ಒಳಗೆ ಹೇಗೆ ಬಂದ ಎಂದು ಪರಿಶೀಲನೆ ನಡೆಸಿದಾಗ ಆತ ಚಾವಣಿ ಮೂಲಕ ಬಂದಿರುವುದು ಗಮನಕ್ಕೆ ಬರುತ್ತದೆ. ಬಂದಾತ ಕಳ್ಳನೆಂದು ದೃಢಪಟ್ಟ ಹಿನ್ನಲೆಯಲ್ಲಿ ಎರಡೇಟು ನೀಡಿ ಆತನನ್ನು ಎಬ್ಬಿಸಿದಾಗ ಆತನ ಕೈಯಲ್ಲಿ ಮನೆಯ ಬೀಗದ ಕೈಗಳು ಪತ್ತೆಯಾಗಿದೆ.
ಕಳ್ಳ ಹೊರಗೆ ಹೋಗಲು ಸುಲಭ ದಾರಿ ಇದ್ದರೂ ಆತನಿಗೆ ಹೊರಗೆ ಹೋಗಲು ಸಾಧ್ಯವಾಗದೆ ಇರುವುದು ನಂಬಿರುವ ದೈವದ ಕಾರಣಿಕ ಎಂದು ಸಾರ್ವಜನಿಕರ ಅಭಿಪ್ರಾಯ.
ಈ ಕುರಿತಾಗಿ ಮಾಧ್ಯಮದೊಂದಿಗೆ ಮಾತನಾಡಿದ ಮನೆಯ ಮಾಲಕ ಸುದರ್ಶನ್ ಅವರು, "ನಮ್ಮ ಮನೆಗೆ ಸುಮಾರು ಒಂದು ನೂರು ವರ್ಷದ ಇತಿಹಾಸವಿದೆ. ಹಿರಯರ ಕಾಲದಿಂದಲೂ ಇಲ್ಲಿ ಕಳ್ಳತನ ನಡೆದೇ ಇಲ್ಲ. ಕಷ್ಟಪಟ್ಟು ಒಳಗೆ ಬಂದ ಕಳ್ಳನಿಗೆ ಮನೆಯಿಂದ ಹೊರಗೆ ಹೋಗಲು ಸುಲಭ ದಾರಿ ಇದ್ದರೂ ನಿದ್ದೆಗೆ ಜಾರಿದ್ದಾನೆ. ಇವೆಲ್ಲವೂ ನಾವು ನಂಬಿದ ದೈವದ ಕಾರಣಿಕವೇ ಆಗಿದೆ" ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಸುದರ್ಶನ್ ಅವರ ದೈವದ ಗುಡಿಯೊಳಗೆ ಬೇರೊಬ್ಬ ಕಳ್ಳ ನುಗ್ಗಿದ್ದು ಕದ್ದ ಹಣದೊಂದಿಗೆ ಪರಾರಿಯಾಗಲು ಆಗದೇ ಅಲ್ಲೇ ಸುತ್ತುತ್ತಾಲ್ಲಿದ್ದ. ಈಗ ಪೊಲೀಸರ ವಶವಾಗಿದ್ದಾನೆ. ಈ ಘಟನೆಯ ಬೆನ್ನಲ್ಲೇ ಈಗ ಈ ಇನ್ನೊಂದು ಸ್ವಾರಸ್ಯಕರ ಘಟನೆ ನಡೆದಿದೆ.