ಮಂಗಳೂರು, ಫೆ 26 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ. ೧೯ ರಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಗೋಲಿಬಾರ್ ಘಟನೆಗೆ ಸಂಬಂಧಿಸಿ ಮಂಗಳವಾರ ಎಸಿ ಕಚೇರಿ ಕೋರ್ಟ್ನಲ್ಲಿ ಮ್ಯಾಜಿಸ್ಟಿರೀಯಲ್ ತನಿಖೆ ನಡೆದಿದ್ದು ಪೊಲೀಸ್ ಇಲಾಖೆ ಪರವಾದ ಸಾಕ್ಷ್ಯವನ್ನು ಸಲ್ಲಿಸಲಾಯಿತು. ಪೊಲೀಸರ ವೈಯಕ್ತಿಕ ಸಾಕ್ಷ್ಯ ಸಲ್ಲಿಕೆಗೆ ಮಾ. 4 ರವರೆಗೆ ಕಾಲಾವಕಾಶ ನೀಡಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್ ತನಿಖೆಯಲ್ಲಿ ಇದುವರೆಗೆ ಸಾರ್ವಜನಿಕ ಹಾಗೂ ಸಂತ್ರಸ್ಥರ ಸಾಕ್ಷ್ಯ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ನೊಟೀಸ್ ಪಡೆದ ಪೊಲೀಸರಿಗೆ ಅನಿವಾರ್ಯ ಕಾರಣದಿಂದಾಗಿ ಸಾಕ್ಷ್ಯ ಸಲ್ಲಿಕೆಗೆ ಹಾಜರಾಗಲು ಅಸಾಧ್ಯವಾದ ಹಿನ್ನಲೆಯಲ್ಲಿ ಕೇವಲ ದಾಖಲೆಗಳ ಸಾಕ್ಷ್ಯವನ್ನು ಮಾತ್ರ ಸಲ್ಲಿಕೆ ಮಾಡಲಾಗಿತ್ತು.
ಪಣಂಬೂರು ಎಸಿಪಿ ಬೆಳ್ಳಿಯಪ್ಪನವರು ಪೊಲೀಸ್ ಇಲಾಖೆಯ ಪರವಾಗಿ ಹಿಂಸಾಚಾರ ಹಾಗೂ ಗೋಲಿಬಾರ್ ಘಟನೆಗೆ ಸಂಬಂಧಿಸಿ ಮರಣೋತ್ತರ ಪರೀಕ್ಷಾ ವರದಿ, ಕೇಸುಗಳ ದಾಖಲಾತಿ, ಎಫ್ಎಸ್ಎಲ್ ವರದಿ ಸೇರಿದಂತೆ ಪ್ರಮುಖ ಸಾಕ್ಷ್ಯಗಳ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿದ್ದರು.
ಯಾವುದೇ ಸಾಕ್ಷ್ಯಗಳ ಸಲ್ಲಿಕೆಯಾಗಿಲ್ಲದ ಹಿನ್ನಲೆಯಲ್ಲಿ ಕೇವಲ ಅರ್ಧ ಗಂಟೆಯಲ್ಲಿ ವಿಚಾರಣೆ ಮುಕ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಅಂದಿನ ಮಂಗಳೂರು ಉತ್ತರ ಎಸಿಪಿಯಾಗಿದ್ದ ಶ್ರೀನಿವಾಸ ಗೌಡ ಸೇರಿದಂತೆ 25 ಮಂದಿ ಪೊಲೀಸರಿಗೆ ವಿಚಾರಣೆಗೆ ಹಾಜರಾಗಲು ತನಿಖಾಧಿಕಾರಿ ಸೂಚನೆ ನೀಡಿದ್ದಾರೆ.
ಪೊಲೀಸ್ ಇಲಾಖೆ ಗೋಲಿಬಾರ್ ಘಟನೆಯ ಕುರಿತಾಗಿ ಹೇಳಿಕೆ ನೀಡಲು ಸಿದ್ಧರಾಗಿರುವ 176 ಮಂದಿ ಪೊಲೀಸರ ಪಟ್ಟಿಯನ್ನು ನೀಡಿದ್ದು ಮಾ.4 ರ ವಿಚಾರಣೆಯಲ್ಲಿ ಪೊಲೀಸರು ವೈಯಕ್ತಿಕ ಸಾಕ್ಷ್ಯ ಹಾಗೂ ಹೇಳಿಕೆ ನೀಡಬೇಕಾಗಿದೆ.