ಮಂಗಳೂರು, ಫೆ.26 (DaijiworldNews/PY) : ಸಾಂಪ್ರಾದಾಯಿಕ ಭಾರತೀಯ ರಂಗಭೂಮಿ ಕಲೆಯಾದ ಯಕ್ಷಗಾನಕ್ಕೆ ಮಹಿಳೆಯೊಬ್ಬರು ಹೆಜ್ಜೆ ಹಾಕುವುದು ಅಪರೂಪ. ಆದರೆ ಇಲ್ಲೊಬ್ಬಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಹುಡುಗಿ ತನ್ನೆಲ್ಲಾ ಕಟ್ಟುಪಾಡುಗಳನ್ನು ಮುರಿದು ಕಲಾಪ್ರಕಾರದಲ್ಲಿ ತನ್ನ ಕಲಾ ಕೌಶಲ್ಯವನ್ನು ಪ್ರದರ್ಶಿಸಲು ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
ತನು ವಿಟ್ಲ ಎಂಬ ಹೆಸರಿನಲ್ಲಿ ಪ್ರಸಿದ್ದಳಾಗಿರುವ ಅರ್ಷಿಯಾ ಅವರು ಬಂಟ್ವಾಳ ತಾಲೂಕಿನ ವಿಟ್ಲದವರು. ಇತ್ತೀಚೆಗೆ ಯಕ್ಷಗಾನಕ್ಕೆ ಸೇರಿ ಸಾಕಷ್ಟು ಪ್ರದರ್ಶನಗಳನ್ನು ನೀಡಿದ್ದು ಅಲ್ಲದೆ, ಜನಪ್ರಿಯ ಕಲಾವಿದರೆಂದು ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಇವರು ಆಟೋಮೊಬೈಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ಧಾರೆ. ಅರ್ಷಿಯಾ ಅವರು ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನೂರಿನಲ್ಲಿ ಪ್ರದರ್ಶಿಸಿದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರದಿಂದ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದ್ದಾರೆ. ಅಂದಿನಿಂದ ಅರ್ಷಿಯಾ ಅವರು ಯಕ್ಷಗಾನ ಕಲಾ ಪ್ರಕಾರ, ಪಾತ್ರ, ಚೆಂಡೆ ಧ್ವನಿಯಿಂದ ಆಕರ್ಷಿತರಾಗಿದ್ದು, ಈ ಮೂಲಕ ಕಲಾಪ್ರಕಾರವನ್ನು ಕಲಿಯಲು ಇಚ್ಚಿಸಿದೆ ಎಂದು ತಿಳಿಸಿದ್ಧಾರೆ.
10ನೇ ವಯಸ್ಸಿನಲ್ಲಿ ತನ್ನೂರಾದ ವಿಟ್ಲದಲ್ಲಿ ಯಕ್ಷಗಾನವನ್ನು ಪ್ರಾರಂಭಿಸಿದ್ದು, ಶಾಲೆಯ ವಾರ್ಷಿಕೋತ್ಸವದ ಸಂದರ್ಭ ಶಾಲಾ ಶಿಕ್ಷಕಿಯೊಬ್ಬರು ತನಗೆ ಯಕ್ಷಾಗಾನವನ್ನು ಕಲಿಸಿದ್ದರು ಎಂದು ಅರ್ಷಿಯಾ ನೆನಪಿಸಿಕೊಳ್ಳುತ್ತಾರೆ.
ನನ್ನ ಶಾಲಾ ದಿನಗಳಲ್ಲಿ ಇತರ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡಿದಾಗ ನಾನು ಅವರ ಯಕ್ಷಗಾನ ಪ್ರದರ್ಶನವನ್ನು ನೋಡಿ ಕಲಿಯುತ್ತಿದ್ದೆ. ನಾನು ಮುಸ್ಲಿಂ ಆಗಿರುವುದರಿಂದ ಯಕ್ಷಗಾನಕ್ಕೆ ಹೋಗುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಅರ್ಷಿಯಾ ತಿಳಿಸಿದ್ದಾರೆ.
ಅರ್ಷಿಯಾ ಅವರು ಮಂಗಳೂರಿನ ಕಡಲಿ ಕಲಾ ಕೇಂದ್ರದಲ್ಲಿ ರಮೇಶ ಭಟ್ ನೇತೃತ್ವದಲ್ಲಿ ಯಕ್ಷಗಾನ ಕಲಿಯುತ್ತಿದ್ಧಾರೆ. ರಮೇಶ ಭಟ್ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಲು ಅವಕಾಶ ನೀಡಿದ್ದಾರೆ.
ಅರ್ಷಿಯಾ ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಅರ್ಷಿಯಾ ನಿಶಂಭಾಸುರ, ರಕ್ತ ಬೀಜಾಸುರ ಹಾಗೂ ಮಹಿಷಾಸುರ ಪಾತ್ರಗಳನ್ನು ನಿರ್ವಹಿಸಿದ್ದು, ಅವರಿಗೆ ಅಸುರ ಹಾಗೂ ವಿಶೇಷವಾಗಿ ಪ್ರವೇಶದ ಪಾತ್ರಗಳು ಇಷ್ಟ ಎಂದು ತಿಳಿಸಿದ್ದಾರೆ.
ಅರ್ಷಿಯಾ ಅವರ ಕುಟುಂಬವು ಅವರಿಗೆ ಪ್ರೋತ್ಸಾಹ ನೀಡಿದೆ, ಆದರೆ, ಅವರ ಸಮುದಾಯದ ಕೆಲವರು ಪ್ರೋತ್ಸಾಹ ನೀಡಲಿಲ್ಲ. ಆದರೆ ಅರ್ಷಿಯಾ ಅವರು ಎಲ್ಲಾ ತೊಂದರೆಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ಯಕ್ಷಗಾನ ರಂಗಕ್ಕೆ ಬಂದಿದ್ಧಾರೆ. ಮಂಗಳೂರು, ಕಾರವಾರ ಹಾಗೂ ಉಡುಪಿಯಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿದ್ಧಾರೆ.
ನನ್ನ ಧ್ವನಿ ದೊಡ್ಡದಾಗಿರುವುದರಿಂದ ಅಸುರ ಪಾತ್ರ ನನಗೆ ಸರಿಹೊಂದುತ್ತದೆ ಎಂದು ಹಲವರು ಹೇಳುತ್ತಿದ್ದರು. ನನಗೆ ಯಕ್ಷಗಾನದಲ್ಲಿ ಪ್ರವೇಶ ಪಾತ್ರ ಇಷ್ಟ ಎಂದ ಅವರು, ನನ್ನ ಮುಂದಿನ ಗುರಿ ಚೆಂಡೆ ವಾದ್ಯವನ್ನು ಕಲಿಯುವುದು. ನಾನು ಯಕ್ಷಗಾನ ಪ್ರಸಂಗದಲ್ಲಿ ಶ್ರೀನಿವಾಸ್ ಕಲ್ಯಾಣ, ಸುದರ್ಶನೋಪಕ್ಯಾನ, ಕಡಂಬ ಕೌಶಿಕ, ಶಂಬವಿ ವಿಜಯ, ರಕ್ತಬೀಜಾಸುರ ವದೆ ಮತ್ತು ಇನ್ನೂ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದೇನೆ ಎಂದರು.
ಪಟ್ಲ ಸತೀಶ್ ಶೆಟ್ಟಿ ಅವರ ಮುಂದೆ ನನ್ನನ್ನು ಸನ್ಮಾನಿಸಿದಾಗ ಹಾಗು ಅವರು ನನಗೆ ಆಶೀರ್ವದಿಸಿದ ದಿನ ಅತ್ಯಂತ ಸ್ಮರಣೀಯ ಕ್ಷಣವಾಗಿದೆ ಎಂದು ಅರ್ಷಿಯಾ ಹೇಳಿದರು.