ಮಂಗಳೂರು, ಫೆ.26 (DaijiworldNews/PY) : ಖಾಸಗಿ ಬಸ್ಗಳಿಗೆ ತಲಪಾಡಿ ಟೋಲ್ ಗೇಟ್ನಲ್ಲಿ ಕೊನೆಯ ಸ್ಟಾಪ್ ನೀಡಿದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಖಾಸಗಿ ಬಸ್ನ ಸಿಬ್ಬಂದಿಗಳು ತಮ್ಮ ವಾಹನಗಳನ್ನು ಟೋಲ್ ಗೇಟ್ ಬಳಿ ಇರಿಸುವ ಮೂಲಕ ಪ್ರತಿಭಟನೆ ಮಾಡಿದ್ದು, ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಸಂದರ್ಭದಲ್ಲಿ ಉಳ್ಳಾಲ ಪೊಲೀಸರು ಪ್ರತಿಭಟನೆ ನಿರತರಿಗೆ ಲಾಠಿ ಚಾರ್ಜ್ ನಡೆಸಿದ್ದಾರೆ.
ಅಧಿಕಾರಿಗಳು ನಿಗದಿಪಡಿಸಿದ ಶುಲ್ಕವನ್ನು ಪಾವತಿಸುತ್ತಿಲ್ಲ ಎಂದು ಖಾಸಗಿ ಬಸ್ ಸಿಬ್ಬಂದಿಗಳು ತಿಳಿಸಿದ್ದಾರೆ. ಕಳೆದ 40 ವರ್ಷಗಳಿಂದ ಈ ಬಸ್ಗಳು ಸಾರ್ವಜನಿಕರಿಗೆ ಸುರಕ್ಷಿತವಾದ ಸೇವೆಯನ್ನು ನೀಡುತ್ತಿದೆ. ತಲಪಾಡಿಯಲ್ಲಿ ಟೋಲ್ ಗೇಟ್ ನಿರ್ಮಿಸಿದ ಬಳಿಕ ವರ್ಷಕ್ಕೆ ಲಕ್ಷ ರೂಪಾಯಿಗಳನ್ನು ಟೋಲ್ಗಾಗಿ ಕೇಳುತ್ತಿದ್ದಾರೆ. ಇದು ಸಮರ್ಥನೀಯವಲ್ಲ. ಅದಲ್ಲದೇ ಸಾರ್ವಜನಿಕರಿಗೆ ತಮ್ಮದೇ ವಾಹನಗಳನ್ನು ಹೊಂದಿದ್ದಾರೆ, ಹಾಗಾಗಿ ಬಸ್ನಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ.
ಖಾಸಗಿ ಬಸ್ ಸಿಬ್ಬಂದಿಗಳು ಕಡಿಮೆ ಮೊತ್ತವನ್ನು ಪಾವತಿಸುತ್ತೇವೆ ಎಂದು ಟೋಲ್ ಅಧಿಕಾರಿಗಳಲ್ಲಿ ವಿನಂತಿಸಿದ್ದು, ಆದರೆ ಟೋಲ್ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿಲ್ಲ. ಈ ನಿಟ್ಟಿನಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದ್ದು ಯಾವುದೇ ಪರಿಣಾಮ ಬೀರಿಲ್ಲ.
ಫೆ.9ರಂದು ತಲಪಾಡಿಯ ಸಾರ್ವಜನಿಕರು, ಖಾಸಗಿ ಬಸ್ ಮಾಲೀಕರು ತಲಪಾಡಿ ಹಾಗೂ ಗಡಿನಾಡು ರಕ್ಷಣಾ ವೇದಿಕೆಯವರು ಟೋಲ್ ಗೇಟ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೂ ಈ ಸಮಸ್ಯೆಗೆ ಪರಿಹಾರ ದೊರಕಿಲ್ಲ.
ಈ ವಿಚಾರವಾಗಿ ಸಾರ್ವಜನಿಕರು ಜಿಲ್ಲಾಧಿಕಾರಿಯಲ್ಲಿ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಬಗೆಹರಿಸಲು ಸಹಾಯಕ ಪೊಲೀಸ್ ಆಯುಕ್ತ ಹಾಗೂ ಉಳ್ಳಾಲ ಠಾಣೆ ಕಚೇರಿಗೆ ಆದೇಶ ನೀಡಿದ್ದರು. ಆದರೆ, ಟೋಲ್ ಗೇಟ್ ಅಧಿಕಾರಿಗಳು ಅವರ ನಿಲುವನ್ನು ಬದಲಾಯಿಸಿಲ್ಲ. ಹಾಗಾಗಿ ಖಾಸಗಿ ಬಸ್ ಚಾಲಕರು ಪ್ರಯಾಣಿಕರನ್ನು ಟೋಲ್ ಗೇಟ್ ಮುಂಚಿತವಾಗಿ ಬಸ್ನಿಂದ ಇಳಿಸುತ್ತಿದ್ದರು. ಇದರಿಂದಾಗಿ ವಿದ್ಯಾರ್ಥಿಗಳು, ವಯಸ್ಸಾದವರು, ಗರ್ಭಿಣಿಯರು, ಮಕ್ಕಳು, ಮಹಿಳೆಯರು ಅರ್ಧ ಕಿ.ಮೀ ನಡೆಯಬೇಕಾಯಿತು.
ಈ ಕಾರಣದಿಂದ ಅಸಮಾಧಾನಗೊಂಡ ಸಾರ್ವಜನಿಕರು ಫೆ.26 ರ ಬುಧವಾರ 7 ಗಂಟೆಯಿಂದ ಟೋಲ್ ಗೇಟ್ ಮುಂದೆ ತಾತ್ಕಾಲಿಕವಾದ ಅಂಗಡಿಗಳನ್ನು ಹಾಕಿದ್ದು, ಟೋಲ್ ಗೇಟ್ ಮುಂಚಿತವಾಗಿ ಪ್ರಯಾಣಿಕರನ್ನು ಇಳಿಸಿ ಬಸ್ಸನ್ನು ವಾಪಾಸ್ ಕೊಂಡೊಯ್ಯದೆ ತಲಪಾಡಿವರೆಗೂ ಕರೆದೊಯ್ಯುವಂತೆ ಒತ್ತಾಯಿಸಿದರು. ಸಾರ್ವಜನಿಕರ ಒತ್ತಡದಿಂದಾಗಿ, ಖಾಸಗಿ ಬಸ್ಸುಗಳು ಟೋಲ್ ಪಾವತಿಸದೆ ಬುಧವಾರ ಬೆಳಿಗ್ಗೆ 7 ರಿಂದ 9ರವರೆಗೆ ಟೋಲ್ ಗೇಟ್ ಮೂಲಕ ಕೊನೆಯ ನಿಲ್ದಾಣಕ್ಕೆ ಸಾಗಿಸಿದವು.
ಟೋಲ್ ಗೇಟ್ ಅಧಿಕಾರಿಗಳು ಖಾಸಗಿ ಬಸ್ಸುಗಳ ಮೇಲೆ ಬೆಳಿಗ್ಗೆ 9 ಗಂಟೆಯ ನಂತರ ಟೋಲ್ ಪಾವತಿಸುವಂತೆ ಒತ್ತಡ ಹೇರಿದ್ದು, ಇದರಿಂದಾಗಿ ಕೌಂಟರ್ ಬಳಿ ಖಾಸಗಿ ಬಸ್ಗಳು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಹಾಗಾಗಿ ಆರ್ಟಿಓ ನೀಡಿದ ವೇಳಾಪಟ್ಟಿಯನ್ನು ಖಾಸಗಿ ಬಸ್ಗಳಿಗೆ ನಿರ್ವಹಿಸಲು ಸಾಧ್ಯವಾಗಲಿಲ್ಲ. ಈ ನಡುವೆಯೇ ಎಲ್ಲಾ ಬಸ್ಗಳು ಟೋಲ್ ಗೇಟ್ ಮುಂದೆ ನಿಂತು ಪ್ರತಿಭಟನೆ ಆರಂಭಿಸಿದವು. ಇದರಿಂದಾಗಿ, ಒಂದು ಕಡೆಯ ವಾಹನಗಳು ಮಂಜೇಶ್ವರ ಕಡೆಗೆ ಹಾಗೂ ಇನ್ನು ಕೆಲವು ವಾಹನಗಳು ಕೆಸಿ ರೋಡ್ವರೆಗೂ ಸಾಲುಗಟ್ಟಿ ನಿಂತಿದ್ದು, ಇತರ ವಾಹನ ಸಂಚಾರರಿಗೆ ತೊಂದರೆಯನ್ನುಂಟು ಮಾಡಿತು.
ಟೋಲ್ ಗೇಟ್ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ ಟೋಲ್ ಗೇಟ್ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಖಾಸಗಿ ಬಸ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಟೋಲ್ ಗೇಟ್ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದರು.
ಹೀಗಾಗಿ ತಲಪಾಡಿ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರವು ಸ್ಥಗಿತಗೊಂಡಿದ್ದು, ಪ್ರಯಾಣಿಕರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಯಿತು. ಟೋಲ್ ಗೇಟ್ ಬಳಿ ಜಮಾಯಿಸಿದ ಜನರು ಅಲ್ಲಿಂದ ತೆರಳದೇ ಇದ್ದ ಸಂದರ್ಭ ಎಸಿಪಿ ಕೋದಂಡರಾಮ ಅವರು ಫೆ.29ರಂದು ಜಿಲ್ಲಾಧಿಕಾರಿ, ಸಂಸದ, ಹಾಗೂ ಟೋಲ್ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು. ಇದಾದ ಸ್ವಲ್ಪ ಸಮಯದ ಬಳಿಕ ಸಾರ್ವಜನಿಕರು ಸ್ಥಳದಿಂದ ಹೊರಟರು. ಆದರೂ ಖಾಸಗಿ ಬಸ್ಗಳು ತಲಪಾಡಿಗೆ ಹೋಗದೇ ಮುಂಚಿತವಾಗಿ ಪ್ರಯಾಣಿಕರನ್ನು ಇಳಿಸುವ ಈ ಸಮಸ್ಯೆಗೆ ಪರಿಹಾರ ದೊರಕಲಿಲ್ಲ.
ಟೋಲ್ ಗೇಟ್ ಮುಂದೆ ಜಮಾಯಿಸಿದ ತಲಪಾಡಿ ಸಾರ್ವಜನಿಕರು, ತಲಪಾಡಿ ಮತ್ತು ಗಡಿನಾಡು ರಕ್ಷಣಾ ವೇದಿಕೆಯ ಖಾಸಗಿ ಬಸ್ ಮಾಲಕರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಪಟ್ಟರೂ ಅದು ವಿಫಲವಾಯಿತು.