ಮಂಗಳೂರು, ಫೆ.26 (DaijiworldNews/PY) : ಏಕನಿವೇಶನ ವಿನ್ಯಾಸ ತಪ್ಪು ಮಾಹಿತಿ ನೀಡಿ ಸರಕಾರಕ್ಕೆ ಮತ್ತು ಜಾಗದ ಮಾಲೀಕರನ್ನು ವಂಚಿಸಿರುವ ಬಗ್ಗೆ ಮೂಡ ಆಯುಕ್ತರ ಭೇಟಿ ಮಾಡಿ ತನಿಖೆಗೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಮಂಗಳೂರು ತಾಲೂಕು ಕೊಡಿಯಾಲುಬೈಲು ಗ್ರಾಮದ ಕದ್ರಿ ವಾರ್ಡಿನ ಮಂಗಳೂರು ಏ ಹೋಬಳಿಯ ಸರ್ವೆ ನಂಬ್ರ 1575-10B1 ಈ ಸ್ಥಳವು 1943ರಿಂದ ಸ್ವಾಧೀನವಿರುತ್ತದೆ. ಸದ್ರಿ ಸ್ಥಳದ ಆರ್.ಟಿ.ಸಿ. ಅಡಂಗಲ್ ಎಫ್.ಎಂ.ಬಿ ನಕ್ಷೆ ಆಕಾರ್ಬಂದ್ ಪ್ರಕಾರ 0.37 ಸೆಂಟ್ಸ್ ಸ್ಥಳ ಇರುತ್ತದೆ.
ಈ ಸ್ಥಳದ ಭೂ ಪರಿವರ್ತನೆ ಆದೇಶ ಪ್ರಕಾರ 0.37 ರಲ್ಲಿ 0.02 ಸೆಂಟ್ಸ್ ಸ್ಥಳವು ಪೂರ್ವ ದಿಕ್ಕಿನಲ್ಲಿರುತ್ತದೆ. ಆದರೆ ನಗರ ಆಸ್ತಿ ಮಾಲೀಕತ್ವದ ದಾಖಲೆ ಪ್ರಕಾರ 0.35 ಸೆಂಟ್ಸ್ ಸ್ಥಳದ ನಕ್ಷೆಯಲ್ಲಿ ಈ ಎರಡು ಸೆಂಟ್ಸ್ಗಳನ್ನು ಪೂರ್ವ ದಿಕ್ಕಿನಲ್ಲಿ ತೋರಿಸುವ ಬದಲು ಉತ್ತರ ದಿಕ್ಕಿನಲ್ಲಿ ತೋರಿಸಿರುತ್ತಾರೆ. ಆದರೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದವರು ಏಕನಿವೇಶನ ವಿನ್ಯಾಸ ಕೊಟ್ಟ ಪ್ರಕಾರ 0.02 ಸೆಂಟ್ಸ್ ಸ್ಥಳವು ಮಾಯವಾಗಿರುತ್ತದೆ. ಅದೇ ನಕ್ಷೆ ಪ್ರಕಾರ ಉತ್ತರ ದಿಕ್ಕಿನಲ್ಲಿರುವ ಪ್ರೈವೇಟ್ ರಸ್ತೆ 4.5 ಮೀಟರ್ ಇರುವ ದಾರಿಯನ್ನು ಏಕನಿವೇಶನ ನಕ್ಷೆಯಲ್ಲಿ 6 ಮೀಟರ್ ಎಗ್ಸಿಸ್ಟಿಂಗ್ ರೋಡ್ ಎಂದು ತೋರಿಸಿರುತ್ತಾರೆ. 1.5 ಮೀಟರ್ ರಸ್ತೆ ಹೆಚ್ಚು ಇದೆ ಎಂದು ತಪ್ಪು ಮಾಹಿತಿ ಬರೆದಿರುತ್ತಾರೆ. ಇದರ ಲಾಭವೇನೆಂದರೆ ಕಟ್ಟಡ ಕಟ್ಟುವಾಗ ಎರಡು ಅಂತಸ್ತು ಜಾಸ್ತಿ ಕಟ್ಟುವ ಹಾಗೆ ಅನುಕೂಲವಾಗುತ್ತದೆ. ಅಲ್ಲದೆ ಕಟ್ಟಲು ಸ್ಕ್ವೇರ್ ಫೀಟ್ ಜಾಸ್ತಿಯಾಗುತ್ತದೆ.
ಇಂತಹ ಕೆಲವು ಪ್ರಕರಣಗಳು ನಗರ ಆಸ್ತಿ ಮಾಲೀಕತ್ವದ ದಾಖಲೆಯಲ್ಲಿ ಮತ್ತು ಮಂಗಳೂರು ಮಹಾನಗರ ಪ್ರಾಧಿಕಾರದ ಕಛೇರಿಯಲ್ಲಿ ನಡೆದಿದ್ದು ತಿಳಿದು ಬಂದಿರುತ್ತದೆ. ಈ ವಿಷಯದಲ್ಲಿ ಸರಕಾರಿ ಅಧಿಕಾರಿಗಳು ಶಾಮೀಲಾಗಿದ್ದು ಭೂಮಾಫಿಯಾದವರಿಗೆ ಅನುಕೂಲವಾಗುವಂತೆ ಸಹಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಶೀಘ್ರದಲ್ಲಿ ಈ ಮೇಲೆ ತಿಳಿಸಿರುವ ಏಕನಿವೇಶನ ವಿನ್ಯಾಸ ಆದೇಶ ಸಂಖ್ಯೆ 3607/2019-20 ಅನ್ನು ರದ್ದುಗೊಳಿಸಬೇಕಾಗಿ ಈ ಮೂಲಕ ಒತ್ತಾಯಿಸುತ್ತೇವೆ, ಹಾಗೂ ಶೀಘ್ರವೇ ಸ್ಥಳವನ್ನು ಸರ್ವೆ ಮಾಡಿಸಿ 0.02 ಸೆಂಟ್ಸ್ನ ಏಕನಿವೇಶನ ಮಾಡಿಸಿಕೊಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.