ಕುಂದಾಪುರ, ಫೆ 26 (DaijiworldNews/SM): ಬೈಂದೂರು ವ್ಯಾಪ್ತಿಯಲ್ಲಿ ದೇವಸ್ಥಾನಗಳ ಕಳವು ಪ್ರಕರಣ ನಿರಂತರವಾಗಿ ನಡೆಯುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದೆ. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ಸಮೀಪದ ಬಡಾಕೆರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿಯೂ ಮಂಗಳವಾರ ತಡರಾತ್ರಿ ಕಳವು ನಡೆದಿದ್ದು ಸುಮಾರು 10 ಲಕ್ಷಕ್ಕೂ ಮಿಕ್ಕಿ ಬೆಳ್ಳಿ ಸೊತ್ತುಗಳನ್ನು ಕಳವುಗೈಯಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ತಡರಾತ್ರಿ ದೇವಸ್ಥಾನದೊಳಗೆ ನುಗ್ಗಿದ ಕಳ್ಳರು ಹಲವು ಕೆ.ಜಿ. ಬೆಳ್ಳಿ ಆಭರಣ ಹಾಗೂ ಸಿಸಿ ಟಿವಿ ಡಿ.ವಿ.ಆರ್. ಹಾಗೂ ಎಲ್.ಇ.ಡಿ. ಟಿವಿಯನ್ನು ಕಳವುಗೈದಿದ್ದಾರೆ. ದೇವಸ್ಥಾನದ ದ್ವಾರಬಾಗಿಲಿಗೆ ಅಳವಡಿಸಲಾಗಿದ್ದ ಬೆಳ್ಳಿ ತಗಡನ್ನು ಸಂಪೂರ್ಣವಾಗಿ ಎಗರಿಸಲಾಗಿದ್ದು ಸುಮಾರು 50 ಸಾವಿರ ಮೌಲ್ಯದ ಸಿಸಿ ಟಿವಿ ಡಿವಿಆರ್ ಕದ್ದೊಯ್ದಿದ್ದಾರೆ.
ಅಲ್ಲದೇ ಬೆಳ್ಳಿಯ ತಟ್ಟೆಗಳನ್ನೂ ದೋಚಿ ಪರಾರಿಯಾಗಿದ್ದಾರೆ. ಬೈಂದೂರು ಪೊಲೀಸ್ ಠಾಣಾಧಿಕಾರಿ ಪಿಎಸ್ಐ ಸಂಗೀತಾ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಕಳೆದೆರಡು ತಿಂಗಳುಗಳಲ್ಲಿ ಇದು ನಾಲ್ಕನೇ ದೇವಸ್ಥಾನ ಕಳವು ಪ್ರಕರಣವಾಗಿದ್ದು, ಸಾರ್ವಜನಿಕರು ಕಳವು ಪ್ರಕರಣದಿಂದ ಭಯಭೀತರಾಗದ್ದಾರೆ.
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.