ಉಡುಪಿ ಫೆ 26: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಫಾ| ಮಹೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಸುಧೀರ್ಘ ನಾಲ್ಕುವರೆ ತಿಂಗಳುಗಳ ತನಿಖೆಯ ನಂತರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ದಾಯ್ಜಿವರ್ಲ್ಡ್ ಸುದ್ದಿ ವಾಹಿನಿಗೆ ದೊರಕಿದ ಮಾಹಿತಿಗಳ ಪ್ರಕಾರ ಫಾ|ಮಹೇಶ್ ಆತ್ಮಹತ್ಯೆಗೈಯುವ ಮೊದಲು ಅವರ ಮೊಬೈಲ್ ಫೋನಿಗೆ ಬಂದ ಕೊನೆಯ ಕರೆಯನ್ನು ಆಧಾರವಾಗಿಟ್ಟುಕೊಂಡು ಪೋಲಿಸ್ ಅಧಿಕಾರಿ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೋಲಿಸರು ತೀವ್ರ ತನಿಖೆಯನ್ನು ನಡೆಸಿದ್ದರು. ತನಿಖೆಯ ಸಂಧರ್ಭದಲ್ಲಿ ದೊರಕಿದ ಸಾಕ್ಷ್ಯಗಳ ಪ್ರಕಾರ ಇದೀಗ ಪೋಲಿಸರು ಸು-ಮೋಟೊ ಪ್ರಕರಣ ದಾಖಲಿಸಿ ಮುದರಂಗಡಿ ಪಂಚಾಯತ್ ಅಧ್ಯಕ್ಷರಾದ ಡೇವಿಡ್ ಡಿ ಸೋಜಾರನ್ನು ಬಂಧಿಸಿದ್ದಾರೆ.
ತನಿಖಾ ತಂಡವು ಕಾತರದಿಂದ ಕಾಯುತ್ತಿದ್ದ ಫಾ|ಮಹೇಶ್ ಅವರ ಮೊಬೈಲ್ ಫೋನಿನ ಫೋರೆನ್ಸಿಕ್ ವರದಿಯು ಇದೀಗ ಪೋಲಿಸರ ಕೈ ಸೇರಿದ್ದು ಪ್ರಕರಣಕ್ಕೆ ಹೆಚ್ಚಿನ ಸಾಕ್ಷ್ಯ ಲಭಿಸಿದ್ದಂತಾಗಿದೆ. ಫೋರೆನ್ಸಿಕ್ ವರದಿಯ ಪ್ರಕಾರ ಫಾ|ಮಹೇಶ್ ಅವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಕೆಲ ನಿಮಿಷಗಳ ಮೊದಲು ಪ್ರಿಯಾ ಎಂಬ ಮಹಿಳೆಗೆ ನಿರಂತರ ಮೊಬೈಲ್ ಸಂದೇಶಗಳನ್ನು ಕಳುಹಿಸಿದ್ದರು ಹಾಗೂ ಆಕೆಯಿಂದ ಸಂದೇಶಗಳನ್ನು ಸ್ವೀಕರಿಸಿದ್ದರೆಂದು ಧೃಡಪಟ್ಟಿದೆ.
ಪೋಲಿಸ್ ಮೂಲಗಳ ಪ್ರಕಾರ ಬಂಧಿತ ಡೇವಿಡ್ ಡಿ ಸೋಜ ತನ್ನ ಪತ್ನಿ ಪ್ರಿಯಾ ಹಾಗೂ ಫಾ|ಮಹೇಶ್ ಅಕ್ಟೋಬರ್ 11 ರಂದು ರಾತ್ರಿ 8 :29 ಹಾಗೂ 9:05 ರ ನಡುವೆ ಮೊಬೈಲ್ ಸಂದೇಶಗಳ ಪರಸ್ಪರ ವಿನಿಮಯವನ್ನು ಗಮನಿಸಿದ್ದು ಈ ಬಗ್ಗೆ ಫಾ| ಮಹೇಶ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದನು. ತನ್ನ ಪತ್ನಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಹಗ್ಗದ ತುಂಡೊಂದರಲ್ಲಿ ನೇಣು ಹಾಕಿ ಜೀವನ ಕೊನೆಗೊಳಿಸುವಂತೆ ಇಲ್ಲವಾದಲ್ಲಿ ಈ ವಿಚಾರದಲ್ಲಿ ಸಾರ್ವಜಣಿಕವಾಗಿ ಮಾನಹಾನಿಗೈಯುವ ಬಗ್ಗೆಯೂ ಡೇವಿಡ್ ಫಾ|ಮಹೇಶ್ ಅವರಿಗೆ ಎಚ್ಚರಿಸಿದ್ದನು.
ಶಿರ್ವ ಡಾನ್ ಬೋಸ್ಕೊ ಶಾಲೆಯ ಪ್ರಾಂಶುಪಾಲ ಹಾಗೂ ಶಿರ್ವ ಇಗರ್ಜಿಯ ಸಹಾಯಕ ಧರ್ಮಗುರುಗಳಾಗಿದ್ದ ಫಾ|ಮಹೇಶ್ 2019 ಅಕ್ಟೋಬರ್ 11 ರಂದು ರಾತ್ರಿ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪೋಲಿಸ್ ಮಾಹಿತಿಗಳ ಪ್ರಕಾರ ಫಾ|ಮಹೇಶ್ ಆತ್ಮಹತ್ಯೆಯ ಸುದ್ದಿ ತಿಳಿದ ತಕ್ಷಣ ಡೇವಿಡ್ ಡಿ ಸೋಜಾ ತನ್ನ ಪತ್ನಿಯ ಮೊಬೈಲ್ ಫೋನಿನಲ್ಲಿದ್ದ ಸಂದೇಶಗಳನ್ನು ಅಳಿಸಿ ಹಾಕಿ ಸಾಕ್ಷ್ಯಾಧಾರಗಳನ್ನು ನಾಶ ಪಡಿಸಲು ಪ್ರಯತ್ನಿಸಿದ್ದನು.