ಮೂಡುಬಿದಿರೆ, ಫೆ.27 (DaijiworldNews/PY) : ಕ್ಷುಲ್ಲಕ ಕಾರಣಕ್ಕಾಗಿ ಸ್ವಂತ ಅಣ್ಣ ಹಾಗೂ ಭಾವನಿಂದಲೇ ಹಲ್ಲೆಗೊಳಗಾದ ಕೆಲ್ಲಪುತ್ತಿಗೆಯ ದಲಿತ ಸಮುದಾಯದ ಸಿದ್ದು ಅವರ ಪುತ್ರ ರವೀಂದ್ರ (38) ಎಂಬುವವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ವಿಚಾರವಾಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ಧಾರೆ.
ಭಾನುವಾರ ರವೀಂದ್ರ ಅವರು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ಕ್ಷುಲ್ಲಕ ಕಾರಣಕ್ಕಾಗಿ ಸಹೋದರ ಶ್ರೀನಿವಾಸ ಹಾಗೂ ಭಾವ ಆನಂದ ಅವರು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ರವೀಂದ್ರ ಅವರ ಹೊಟ್ಟೆಗೆ ತುಳಿದ ಕಾರಣ ರಕ್ತ ವಾಂತಿ ಮಾಡಿದ್ದರು. ರವೀಂದ್ರ ಅವರ ಬೊಬ್ಬೆ ಕೇಳಿದ ನೆರೆಮನೆಯವರು ಧಾವಿಸಿ ರವೀಂದ್ರ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ನಂತರ ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ರವೀಂದ್ರ ಅವರು ಕರಿಮೆಣಸು ಕೊಯ್ಯಲು ಹೋಗಿ ಮರದಿಂದ ಬಿದ್ದಿದ್ದರೆಂದು ಆರೋಪಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಆದರೆ, ವಿಚಾರಣೆ ಸಂದರ್ಭ ಆರೋಪಿಗಳ ಹಲ್ಲೆಯಿಂದ ರವೀಂದ್ರ ಅವರು ಮೃತಪಟ್ಟಿದ್ದು ಎಂದು ತಿಳಿದುಬಂದಿದೆ.
ರವೀಂದ್ರ ಅವರು ಅವಿವಾಹಿತರಾಗಿದ್ದು, ಮನೆಯ ಆಧಾರಸ್ತಂಭವಾಗಿದ್ದರು.
ಆರೋಪಿಗಳಾದ ಶ್ರೀನಿವಾಸ (42) ಹಾಗೂ ಆನಂದ (40) ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದೆ.