ಮಂಗಳೂರು, ಫೆ 27 (Daijiworld News/MB) : "ಬಿಜೆಪಿಯು ಯಾವಾಗಲೂ ಪಾಕಿಸ್ತಾನದ ಕುರಿತಾಗಿಯೇ ಮಾತನಾಡುತ್ತದೆ. ಕೊರೋನಾ ವೈರಸ್ನಂತೆ ಬಿಜೆಪಿಗೆ ಪಾಕಿಸ್ತಾನದ ವೈರಸ್ ತಗಲಿದೆ. ಆ ವೈರಸ್ಗೆ ನಮ್ಮ ದೇಶದಲ್ಲಿ ಯಾವುದೇ ಔಷಧಿಯಿಲ್ಲ. ಇದನ್ನು ಸರಿ ಮಾಡಲು ಬಿಜೆಪಿಯವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ನಿಜವಾಗಿ ಈ ರೀತಿ ಹೇಳಿಕೆ ನೀಡುವವರೇ ದೇಶ ದ್ರೋಹಿಗಳು" ಎಂದು ಶಾಸಕ ಯುಟಿ ಖಾದರ್ ಟೀಕೆ ಮಾಡಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ವಾತಂತ್ಯ್ರ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಬಸನ ಗೌಡ ಪಾಟೀಲ ಯತ್ನಾಳ್ ಹೇಳಿಕೆ ಕುರಿತಾಗಿ ಮಾತನಾಡಿ, "ಈ ಹೇಳಿಕೆ ಖಂಡಾನಾರ್ಹ. ಗಾಂಧಿ ನಡೆಸಿದ ಸ್ವಾತಂತ್ರ ಹೋರಾಟವನ್ನು ಇವರು ಟೀಕೆ ಮಾಡುತ್ತಿದ್ದು ಇದು ಅವರ ಹಿಡನ್ ಅಜೆಂಡಾವಾಗಿದೆ" ಎಂದು ಹೇಳಿದರು.
"ಯತ್ನಾಳ್ ಈ ಹೇಳಿಕೆ ಬಗ್ಗೆ ಬಿಜೆಪಿಯ ನಿಲುವು ಯಾವುದು, ಈ ಕುರಿತಾಗಿ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು" ಎಂದು ಆಗ್ರಹಿಸಿದರು.
"ಹಿರಿಯ ಹೋರಾಟಗಾರರನ್ನು ಈ ರೀತಿಯಾಗಿ ಅವಹೇಳನ ಮಾಡುವುದು ಖಂಡನೀಯ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
"ಇನ್ನೇನು ಬಜೆಟ್ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಸರ್ಕಾರದ ಲೋಪಗಳನ್ನು ಯಾರು ಚರ್ಚೆ ಮಾಡದೆ ಈ ಹೇಳಿಕೆಗಳ ಕುರಿತಾಗಿಯೇ ಚರ್ಚೆ ನಡೆಸಲು ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಇದು ವ್ಯವಸ್ಥಿತ ಷಡ್ಯಂತ್ರ" ಎಂದು ಆರೋಪಿಸಿದರು.
ಹಾಗೆಯೇ ಈ ಸಂದರ್ಭದಲ್ಲಿ ದೆಹಲಿ ಹಿಂಸಾಚಾರದ ಕುರಿತಾಗಿ ಮಾತನಾಡಿ, "ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೇರ ಹೊಣೆ ಅವರು ರಾಜೀನಾಮೆ ನೀಡಬೇಕು" ಎಂದು ಹೇಳಿದರು.
"ದೆಹಲಿ ಹಿಂಸಾಚಾರವು ತುಂಬಾ ನೋವು ತಂದ ವಿಚಾರ. ಈ ಘಟನೆ ವಿಶ್ವಕ್ಕೆ ಕಪ್ಪು ಚುಕ್ಕೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈ ಪರಿಸ್ಥಿತಿ ಹತೋಟಿಗೆ ತರಲು ವಿಫಲವಾಗಿದೆ" ಎಂದು ಆರೋಪಿಸಿದರು.
"ನಳಿನ್ ಕುಮಾರ್ ಅವರು ದೆಹಲಿಯ ಘಟನೆಗೆ ಕಾಂಗ್ರೆಸ್ ಕಾರಣ ಎಂದು ಹೇಳುತ್ತಾರೆ. ಇದು ನಗು ಬರಿಸುವ ವಿಷಯ. ಅವರು ನೈಜ್ಯವಾಗಿ ಅಲಂಕಾರಕ್ಕೆ ಮಾತ್ರ ಸ್ಥಾನ ಪಡೆದವರು. ಅವರಿಗೆ ಯಾವುದೇ ಅಧಿಕಾರವಿಲ್ಲ. ಅವರಿಗೆ ಪಕ್ಷ ಕಾಂಗ್ರೆಸ್ನ್ನು ದೂರುವ ಕೆಲಸ ನೀಡಿದೆ. ಕಟೀಲ್ ಅವರ ಕಷ್ಟ ನನಗೆ ಅರ್ಥವಾಗುತ್ತದೆ. ಇಂತಹ ಪರಿಸ್ಥಿತಿ ದಕ್ಷಿನ ಕನ್ನಡದ ಶಾಸಕರಿಗೆ ಬರಬಾರದು" ಎಂದು ವ್ಯಂಗ್ಯ ಮಾಡಿದರು.
"ವಿಧಾನಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಮಂಗಳೂರು ಘಟನೆಯ ಬಗ್ಗೆ ಮಾತನಾಡಿರುವುದು ಶೋಚನಿಯ. ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಮಾತನಾಡಿರುವುದು ಮಂಗಳೂರು ಕ್ಷೇತ್ರಕ್ಕೆ ಕಳಂಕ ತರುವಂತಹದು. ಆ ಹಿನ್ನಲೆಯಲ್ಲಿ ಅವರು ಕೂಡಲೇ ಮಂಗಳೂರು ಜನತೆಯಲ್ಲಿ ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದರು.
"ಇನ್ನೂ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಕೊಲೆಗೆ ಯತ್ನ ನಡೆದಿದೆ ಎಂಬ ವಿಚಾರದ ಬಗ್ಗೆ ತನಿಖೆ ನಡೆಯಬೇಕು. ಇದರ ಹಿಂದೆ ಯಾರೇ ಇದ್ದರೂ ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.