ಕಾಸರಗೋಡು, ಫೆ 27 (DaijiworldNews/SM): ಬಿಜೆಪಿ ನಾಯಕತ್ವದ ವಿರುದ್ಧ ಅತೃಪ್ತಗೊಂಡಿರುವ ಕುಂಟಾರು ರವೀಶ ತಂತ್ರಿ ಗುರುವಾರ ನಡೆದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಗೈರಾಗುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ.
ನೂತನ ಅಧ್ಯಕ್ಷ ಕೆ. ಶ್ರೀಕಾಂತ್ ರವರ ಪದಗ್ರಹಣ ಸಮಾರಂಭ ನಗರಸಭಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಎಲ್ಲರ ಗಮನ ತಂತ್ರಿಯವರ ಮೇಲಿತ್ತು. ತಂತ್ರಿಯವರು ಆಗಮಿಸುವ ನಿರೀಕ್ಷೆಯನ್ನು ಮುಖಂಡರು ಹೊಂದಿದ್ದರು. ಆದರೆ ಗೈರಾಗುವ ಮೂಲಕ ವರಿಷ್ಠರಿಗೆ ಮತ್ತೊಮ್ಮೆ ಸೆಡ್ಡು ಹೊಡೆದಿದ್ದಾರೆ.
ಪಕ್ಷದ ರಾಜ್ಯ ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಪಕ್ಷವು ಅಂಗೀಕರಿಸಿಲ್ಲ. ಬುಧವಾರ ರಾತ್ರಿ ಕಾಸರಗೋಡಿನಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ರವರು ಮಾತುಕತೆ ನಡೆಸಲು ತೀರ್ಮಾನಿಸಿದ್ದರೂ ರವೀಶ ತಂತ್ರಿ ಸಂಧಾನ ವಿಫಲಗೊಂಡಿತ್ತು. ಫೆಬ್ರವರಿ 27ರ ಗುರುವಾರದಂದು ನಗರ ಸಭಾಂಗಣದಲ್ಲಿ ಆಯೋಜಿಸಿದ್ದ ಕೆ. ಶ್ರೀಕಾಂತ್ ರವರ ಪದಗ್ರಹಣ ಸಮಾರಂಭಕ್ಕೆ ಗೈರಾಗಿದ್ದು, ಮುಖಂಡರು, ಕಾರ್ಯಕರ್ತರ ಸಂಪರ್ಕಕ್ಕೆ ಲಭಿಸಿಲ್ಲ.
ಕೆ. ಶ್ರೀಕಾಂತ್ ರವರನ್ನು ಮತ್ತೆ ಜಿಲ್ಲಾಧ್ಯಕ್ಷರನ್ನಾಗಿ ಘೋಷಿಸಿದ ಬೆನ್ನಲ್ಲೇ ಅಸಮಾಧಾನಗೊಂಡ ರವೀಶ ತಂತ್ರಿಯವರು ರಾಜ್ಯ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ಆದರೆ ಮನವೊಲಿಸುವ ಪ್ರಯತ್ನ ನಡೆಯುತ್ತಿತ್ತು. ಬಿಜೆಪಿ ಕರ್ನಾಟಕ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರ್ ಎಸ್ ಎಸ್ ಮುಖಂಡರು ತಂತ್ರಿಯವರನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದರು.
ಗುರುವಾರ ನಡೆಯುವ ಪದಗ್ರಹಣ ಸಮಾರಂಭದಲ್ಲಿ ತಂತ್ರಿ ಪಾಲ್ಗೊಳ್ಳಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ತಂತ್ರಿಯವರ ಮುಂದಿನ ನಿಲುವು ಏನೆಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಕೆ. ಶ್ರೀಕಾಂತ್ ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ತೆಗೆದುಕೊಂಡರು. ಜಿಲ್ಲಾ ಹಾಗೂ ರಾಜ್ಯ ನಾಯಕರು ಪಾಲ್ಗೊಂಡಿದ್ದರು.