ಮಂಗಳೂರು, ಫೆ 27 (DaijiworldNews/SM): ನನಗೆ ಕೊಲೆ ಬೆದರಿಕೆ ಇದ್ದು, ದುಷ್ಕರ್ಮಿಗಳು ಕೊಲೆಗೆ ಯತ್ನ ನಡೆಸಿದ್ದಾರೆ ಎಂದು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಮಂಗಳೂರಿನ ಖಾಝಿ ಚೆಂಬರಿಕ ಸಿ.ಎಂ.ಅಬ್ದುಲ್ಲಾ ಮೌಲವಿ ಅವರ ನಿಗೂಢ ಸಾವಿಗೆ ಸಂಬಂಧಿಸಿ ಅಲ್ಲಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ತ್ವಾಖಾ ಉಸ್ತಾದ್ ಅವರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದರು. ಖಾಝಿ ಅವರು ಸಂಚರಿಸುವ ಕಾರಿನ ಹಿಂಬದಿಯ ಟಯರಿಗೆ ಚೂಪಾದ ಆಯುಧ ಮಾದರಿಯ ಕೊಕ್ಕೆಗಳನ್ನು ಸಿಲುಕಿಸಿ ಕಾರು ಚಲಿಸುತ್ತಿರುವಾಗಲೇ ಅಪಘಾತಕ್ಕೀಡಾಗಲು ಪ್ರಯತ್ನ ನಡೆದಿದೆ. ಕಾರಿನ ಟಯರಿಗೆ ಹೀಗೆ ಕತ್ತಿ ಮತ್ತಿತರ ಆಯುಧಗಳನ್ನು ಯಾರು, ಯಾವಾಗ ಅಳವಡಿಸುತ್ತಿದ್ದರು ಎಂದು ತಿಳಿದು ಬಂದಿಲ್ಲ.
ಒಮ್ಮೆ ಬಂದರು ಪ್ರದೇಶದ ಕಾರ್ಯಕ್ರಮಕ್ಕೆ ಮತ್ತು ಇನ್ನೊಮ್ಮೆ ಹಳೆಯಂಗಡಿ ಸಮೀಪದ ಬೊಳ್ಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುವಾಗ ಇಂತಹ ಕುಕೃತ್ಯ ನಡೆಸಿ ಖಾಝಿಯ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕಳೆದ ಕೆಲವು ಸಮಯದಿಂದ ತಂಡವೊಂದು ಹಿಂಬಾಲಿಸಿ ಹತ್ಯೆಗೆ ಸಂಚು ಹೂಡಿದೆ ಎಂದು ಖಾಝಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ದೂರನ್ನು ಸ್ವೀಕರಿಸಿದ್ದು, ತನಿಖೆ ಆರಂಭಿಸಿದ್ದಾರೆ. ಖಾಝಿಯವರಿಗೆ ಕೊಲೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ಸೂಕ್ತ ತನಿಖೆಯಾಗಬೇಕು. ಆದರೆ, ಇದು ಕೇವಲ ಹಿಟ್ ಆಂಡ್ ರನ್ ಪ್ರಕರಣದಂತೆ ಆಗುತ್ತದೆ ಬಿಟ್ಟರೆ ತನಿಖೆಯಾಗುವುದಿಲ್ಲ. ಯಾರೇ ಆಗಲಿ, ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.