ಮಂಗಳೂರು, ಫೆ 28 (Daijiworld News/MB) : ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ಫೆ. 28 ರ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಸ್ತೆ ಸಾರಿಗೆ ಸಭೆ ನಡೆದಿದ್ದು ಈ ಸಭೆಯಲ್ಲಿ ನಗರದಲ್ಲಿ ಕನಿಷ್ಠ ಆಟೋ ರಿಕ್ಷಾ ದರವನ್ನು 30 ರೂಗಳಿಗೆ ಹೆಚ್ಚಿಸುವ ಆದೇಶಿಸಲಾಗಿದೆ. ಈ ದರವು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಈ ಹಿಂದೆ ಆಟೋರಿಕ್ಷಾ ದರವನ್ನು ಕಡಿಮೆ ಮಾಡಿದ್ದರಿಂದ ಆಟೊರಿಕ್ಷಾ ಚಾಲಕರಿಗೆ ತೊಂದರೆ ಉಂಟಾಗಿದೆ. ಪ್ರಸ್ತುತ ಪೆಟ್ರೋಲ್, ಗ್ಯಾಸ್ ದರ, ವಿಮೆ ಮೊತ್ತಗಳು ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಕನಿಷ್ಠ ದರವನ್ನು 30 ರೂ.ಗಳಿಗೆ ಹಾಗೂ ಪ್ರತಿ ಕಿ.ಮೀ. 16 ರೂ. ಹೆಚ್ಚಿಸಬೇಕೆಂದು ಆಟೋ ಚಾಲಕರು ಒತ್ತಾಯ ಮಾಡಿದ್ದು ಚರ್ಚೆ ನಡೆಸಿ ಕನಿಷ್ಠ ದರವನ್ನು 30 ರೂ.ಗಳಿಗೆ ಹಾಗೂ ಪ್ರತಿ ಕಿ.ಮೀ. 16 ರೂ. ಹೆಚ್ಚಿಸಲಾಗಿದೆ.
ಆಟೋ ಚಾಲಕರು ಮೊದಲು 15 ನಿಮಿಷಗಳು ಕಾದಲ್ಲಿ (ವೇಟಿಂಗ್ ಚಾರ್ಚ್) ಯಾವುದೇ ದರವನ್ನು ಪ್ರಯಾಣಿಕರು ತೆರಬೇಕಾಗಿಲ್ಲ. 15 ನಿಮಿಷಕ್ಕಿಂತ ಅಧಿಕ ಕಾಲ ಕಾದಲ್ಲಿ 5 ರೂ. ಅಧಿಕವಾಗಿ ಪಾವತಿಸಬೇಕಾಗಿದೆ.
ಹಾಗೆಯೇ 20 ಕೆಜಿವರೆಗೆ ಸರಕು ಶುಲ್ಕ ಉಚಿತವಾಗಿದ್ದು 20 ಕೆಜಿಗಿಂತ ಅಧಿಕ ಸರಕಿಗೆ ಪ್ರತಿ ಕೆಜಿಗೆ 5 ರೂ. ಪಾವತಿಸತಕ್ಕದು. ಹಾಗೆಯೇ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಆಟೋ ಚಾಲಕರು ಒಂದೂವರೆ ಪಟ್ಟು ಹೆಚ್ಚು ದರವನ್ನು ವಿಧಿಸಬಹುದು.
ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ಹಲವಾರು ಸಮಸ್ಯೆಗಳನ್ನು ಜಿಲ್ಲಾಧಿಕಾರಿಯ ಮುಂದಿಟ್ಟಿದ್ದು ನಗರದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಪರವಾನಿಗೆ ನೀಡುವುದರಿಂದ ಆಟೋ ಚಾಳಕರಿಗೆ ತೊಂದರೆ ಉಂಟಾಗಿದೆ. ಉಡುಪಿಯಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ ಆದರೆ ಮಂಗಳೂರಿನಲ್ಲಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ಈ ಕುರಿತು ಉತ್ತರಿಸಿದ ಆರ್ಟಿಒ ಅಧಿಕಾರಿಯೊಬ್ಬರು, "ಬೈಕ್ ಟ್ಯಾಕ್ಸಿಗೆ ಸರ್ಕಾರದಿಂದ ಪರವಾನಿಗೆ ಪಡೆಯಲಾಗಿದೆ. ಇದನ್ನು ಒಂದು ಉದ್ಯಮವಾಗಿ ಪರಿಗಣಿಸಲಾಗಿದೆ. ಉಡುಪಿಯಲ್ಲಿ ಸ್ಥಳೀಯ ನಗರಸಭೆ ನಿರ್ಧಾರ ಮಾಡಿ ಬೈಕ್ ಟ್ಯಾಕ್ಸಿ ನಿಷೇಧ ಮಾಡಿದೆ. ಮಂಗಳೂರಿನಲ್ಲಿಯೂ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳಬಹುದು ಹೊರತು ಸಾರಿಗೆ ಇಲಾಖೆ ಇದನ್ನು ನಿಷೇಧ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ಆರ್ಟಿಒ ಸಭೆ ನಡೆಸಬೇಕೆಂದು ಆಟೋ ಚಾಲಕ ಮತ್ತು ಮಾಲೀಕರು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಮಂಗಳೂರು ಆರ್ಟಿಒ ಅಧಿಕಾರಿ ರಾಮಕೃಷ್ಣ ರೈ, ಪುತ್ತೂರು ಆರ್ಟಿಒ ಅಧಿಕಾರಿ ಕೆ ಆನಂದ ಗೌಡ, ಎಎಸ್ಪಿ ವಿಕ್ರಂ ವಿ ಅಮಾಟೆ ಮತ್ತು ಸಂಚಾರ ನಿಗಮದ ಎಸಿಪಿ ಮಂಜುನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.