ಮಂಗಳೂರು, ಫೆ 28 (Daijiworld News/MB) : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಂಟೋನ್ಮೆಂಟ್ ವಾರ್ಡ್ನ ದಿವಾಕರ ಪಾಂಡೇಶ್ವರ ಹಾಗೂ ನೂತನ ಉಪಮೇಯರ್ ಆಗಿ ಕುಳಾಯಿ ವಾರ್ಡ್ನ ವೇದಾವತಿಯವರು ಆಯ್ಕೆಯಾಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ಸ್ಥಾಯೀ ಸಮಿತಿ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು.
60 ಕಾರ್ಪೋರೇಟರ್ಗಳು ಹಾಗೂ ಶಾಸಕ ವೇದವ್ಯಾಸ ಕಾಮತ್, ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರನ್ನು ಸೇರಿಸಿ ಒಟ್ಟು 63 ಮತಗಳಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗೈರು ಹಾಜರಾಗಿದ್ದರು.
ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ ಕೇಶವ ಅವರು ಸ್ಫರ್ಧಿಸಿದ್ದು ಅವರಿಗೆ 15 ಮತಗಳು (14 ಕಾರ್ಪೋರೇಟರ್ಗಳು ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ) ಹಾಗೂ ಬಿಜೆಪಿಯ ದಿವಾಕರ್ ಅವರಿಗೆ 46 ಮತಗಳು (44 ಕಾರ್ಪೋರೇಟರ್ಗಳು ಹಾಗೂ ಇಬ್ಬರು ಶಾಸಕರು) ಲಭಿಸಿದೆ.
ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ ಝೀನತ್ ಶಂಶುದ್ದೀನ್ ಸ್ಫರ್ಧಿಸಿದ್ದು ಅವರಿಗೆ 17 ಮತಗಳು ಹಾಗೂ ಬಿಜೆಪಿಯ ವೇದಾವತಿಯವರಿಗೆ 46 ಮತಗಳು ಲಭಿಸಿದೆ.
ಮೇಯರ್ ಚುನಾವಣೆ ಸಂದರ್ಭದಲ್ಲಿ ತಟಸ್ಥವಾಗಿದ್ದ ಎಸ್ಡಿಪಿಐ ಪಕ್ಷದ ಇಬ್ಬರು ಕಾರ್ಪೋರೇಟರ್ಗಳಾದ ಶಂಶದ್ ಅಬೂಬಕರ್ ಹಾಗೂ ಮುನೀಬ್ ಬೆಂಗ್ರೆ ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಜೀನತ್ ಅವರಿಗೆ ಮತ ಚಲಾಯಿಸಿದ್ದಾರೆ.
ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರು ವಿ.ಯಶವಂತ್ ಅವರು ಚುನಾವಣಾಧಿಕಾರಿಯಾಗಿದ್ದು ಅಪರ ಪ್ರಾದೇಶಿಕ ಆಯುಕ್ತರು ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಉಪಸ್ಥಿತರಿದ್ದರು.
ನವೆಂಬರ್ 12 ರಂದು ನಡೆದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೇಯರ್ ದಿವಾಕರ್ ಅವರು ಕಂಟೋನ್ಮೆಂಟ್ ವಾರ್ಡ್ನಲ್ಲಿ ಕಾಂಗ್ರೆಸ್ನ ಕೆ. ಭಾಸ್ಕರ ರಾವ್ ಅವರನ್ನು ಸೋಲಿಸಿ ಜಯಗಳಿಸಿದ್ದರು. ವೇದಾವತಿಯವರು ಕುಳಾಯಿ ವಾರ್ಡ್ನಲ್ಲಿ ಕಾಂಗ್ರೆಸ್ನ ಗಾಯತ್ರಿ ಅವರನ್ನು ಪರಾಭವಗೊಳಿಸಿ ಗೆಲುವು ಸಾಧಿಸಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ 60 ಕ್ಷೇತ್ರಗಳ ಪೈಕಿ ಬಿಜೆಪಿ 44 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ, ಎಸ್ಡಿಪಿಐ 2 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
ಸಾರ್ವಜನಿಕ ಆರೋಗ್ಯ, ಶಿಕ್ಷಣ, ನ್ಯಾಯ ಸಮಿತಿಗೆ ಅಶ್ರಫ್, ಪೂರ್ಣಿಮಾ, ಚಂದ್ರಾವತಿ, ವರುಣ್ ಚೌಟ, ಲೋಹಿತ್, ಭರತ್ ಕುಮಾರ್, ಸುಮಿತ್ರಾ, ಪಟ್ಟಣ ಯೋಜನೆ ಸುಧಾರಣೆ ಸ್ಥಾಯಿ ಸಮಿತಿಗೆ ಅಬ್ದುಲ್ ಲತೀಫ್, ಎ.ಸಿ. ವಿನಯ ರಾಜ್, ಶರತ್ ಕುಮಾರ್, ಶಕೀಲ ಕಾವ, ಕದ್ರಿ ಮನೋಹರ ಶೆಟ್ಟಿ, ಕಿಶೋರ್ ಕೊಟ್ಟಾರಿ, ನಯನ ಆರ್., ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಅನಿಲ್ ಕುಮಾರ್, ಎಂ. ಶಶಿಧರ ಹೆಗ್ಡೆ, ಜಗದೀಶ್ ಶೆಟ್ಟಿ, ಗಾಯತ್ರಿ, ಸಂಧ್ಯಾ, ರೇವತಿ, ಲೋಕೇಶ್ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ನೂತನ ಮೇಯರ್ ದಿವಾಕರ್ ಅವರು, "ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಮಾಡಿ ಕೊಟ್ಟ ಬಿಜೆಪಿ ಪಕ್ಷಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನನಗೆ ಮತ ಚಲಾಯಿಸಿದರಿಗೆ ಹಾಗೂ ನಾಯಕರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಮಂಗಳೂರಿನ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ. ಯಾವುದೇ ರಾಜಕೀಯ ಮಾಡದೇ ನಾವೆಲ್ಲರೂ ಸೇರಿ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತೇವೆ" ಎಂದು ಹೇಳಿದರು.
"ನೀರಿನ ದರದ ಕುರಿತಾಗಿ ಬಹಳಷ್ಟು ದೂರುಗಳಿವೆ. ಈ ಕುರಿತಾಗಿ ಶಾಸಕರು ಹಾಗೂ ಸಂಸದರೊಂದಿಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ಪ್ರತಿ ವಾರ ಐದು ವಾರ್ಡ್ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ" ಎಂದು ತಿಳಿಸಿದ್ದಾರೆ.
ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್, "ಮೇಯರ್ ಆಗಿ ಆಯ್ಕೆಯಾದ ದಿವಾಕರ್ ಹಾಗೂ ಉಪಮೇಯರ್ ಆಗಿ ಆಯ್ಕೆಯಾದ ವೇದಾವತಿಯವರಿಗೆ ಅಭಿನಂದನೆಗಳು. ಅವರ ಅಧಿಕಾರವಧಿಯಲ್ಲಿ ಮಂಗಳೂರಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಲಿ" ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಮಂಗಳೂರು ಉತ್ತರದ ಶಾಸಕ ಡಾ. ಭರತ್ ವೈ ಶೆಟ್ಟಿ, "ಉಪಮೇಯರ್ ಹಾಗೂ ಮೇಯರ್ ಅವರಿಗೆ ಹಲವಾರು ಜವಾಬ್ದಾರಿಯಿದೆ. ನಾವು ಮಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಕಾರ್ಯ ಮಾಡಬೇಕು" ಎಂದು ಹೇಳಿದ್ದಾರೆ.