ಕಾಸರಗೋಡು, ಫೆ 13: ಕಣ್ಣೂರಿನ ಮಟ್ಟನ್ನೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಾಂಬ್ ಎಸೆದು ಬಳಿಕ ಮಚ್ಚಿನಿಂದ ಕಡಿದು ಕೊಲೆಗೈದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ.
ಕೊಲೆಯಾದವನನ್ನು ಯುವ ಕಾಂಗ್ರೆಸ್ ಮಟ್ಟನ್ನೂರು ಬ್ಲಾಕ್ ಕಾರ್ಯದರ್ಶಿ ಶುಹೈಬ್ (30) ಎಂದು ಗುರುತಿಸಲಾಗಿದೆ.
ಶುಹೈಬ್ ಜೊತೆಗಿದ್ದ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ನೌಶಾದ್ (29), ರಿಯಾಜ್ (28) ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಹೈಬ್ ಮೇಲೆ ಹಲ್ಲೆ ನಡೆಸುವುದನ್ನು ತಡೆಯಲೆತ್ನಿಸಿದಾಗ ಇವರ ಮೇಲೆಯೂ ತಂಡ ದಾಳಿ ನಡೆಸಿದೆ.
ಕೃತ್ಯವನ್ನು ಖಂಡಿಸಿ ಯು ಡಿ ಎಫ್ ಇಂದು ಕಣ್ಣೂರು ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಿದೆ. ವ್ಯಾನ್ ನಲ್ಲಿ ಬಂದ ತಂಡವು ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ರಸ್ತೆ ಬದಿಯ ಗೂಡಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಶುಹೈಬ್ ಮೇಲೆ ಮೊದಲು ಬಾಂಬ್ ಎಸೆದ ತಂಡವು ಬಳಿಕ ಕಡಿದು ಪರಾರಿಯಾಗಿದೆ.
ಕೆಲ ದಿನಗಳ ಹಿಂದೆ ಎಡಯನ್ನೂರು ಎಂಬಲ್ಲಿ ಎಸ್ ಎಫ್ ಐ ಮತ್ತು ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ ಕೆ ಎಸ್ ಯು ನಡುವೆ ಘರ್ಷಣೆ ನಡೆದಿತ್ತು. ಈ ದ್ವೇಷ ಘಟನೆಗೆ ಕಾರಣ ಎನ್ನಲಾಗಿದೆ.
ಸ್ಥಳದ್ಲಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ.