ಮಂಗಳೂರು, ಫೆ 28 (DaijiworldNews/SM): ಅವೈಜ್ಞಾನಿಕ ಕಟ್ಟಡ ಕಾಮಗಾರಿಯಿಂದಾಗಿ ಇಬ್ಬರು ಅಮಾಯಕರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ತಡೆಗೋಡೆ ಕಾಮಗಾರಿ ನಡೆಸುತ್ತಿದ್ದಾಗ ಕಟ್ಟಡದ ಪಾರ್ಶ್ವದಲ್ಲಿ ಮಣ್ಣು ಕುಸಿವಾಗಿದ್ದು ಮಣ್ಣಿನಡಿಗೆ ಸಿಲುಕಿಕೊಂಡ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಇಹಲೋಕದ ಪಯಣ ಮುಗಿಸಿದ್ದಾರೆ.
ಹೌದು ಮಂಗಳೂರು ನಗರದ ಹೃದಯಭಾಗದಲ್ಲಿ ಹೆಸರಾಂತ ಉದ್ಯಮಿಯೊಬ್ಬರು ಕಟ್ಟಡ ಕಾಮಗಾರಿ ನಡೆಸುತ್ತಿದ್ದರು. ಆರು ಅಂತಸ್ತಿನ ತ್ರೀ ಸ್ಟಾರ್ ಹೊಟೇಲ್ ನಿರ್ಮಾಣಕ್ಕಾಗಿ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ, ದುರದೃಷ್ಟವಶಾತ್ ನಡೆಯಬಾರದ ದುರ್ಘಟನೆ ನಡೆದುಹೋಗಿದೆ. ಕಟ್ಟಡಕ್ಕೆ ಸೂಕ್ತ ಸೆಟ್ ಬ್ಯಾಕ್ ಇಲ್ಲದ ಕಾರಣ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ಈ ಸಂದರ್ಭದಲ್ಲೇ ಅಂಥ ಜಾಗದಲ್ಲಿ ರಸ್ತೆಯ ಭಾಗ ಕುಸಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ದುರಂತ ಸಾವು ಕಂಡಿದ್ದಾರೆ.
ಎರಡು ಅಂತಸ್ತಿಗಿಂತ ಹೆಚ್ಚು ಎತ್ತರದ ಕಟ್ಟಡ ನಿರ್ಮಾಣಕ್ಕೆ ಸುತ್ತ ಕಟ್ಟಡದ ಎತ್ತರದ ಮೂರನೇ ಒಂದರಷ್ಟು ಸೆಟ್ ಬ್ಯಾಕ್ ಏರಿಯಾ ಇರಬೇಕೆಂಬ ನಿಯಮವಿದೆ. ಆದರೆ, ಈ ಕಟ್ಟಡ ಆರು ಅಂತಸ್ತಿನದಾಗಿದ್ದು, ಈಗಾಗಲೇ ನಾಲ್ಕು ಮಹಡಿಯವರೆಗೆ ಕಟ್ಟಡ ಕಾಮಗಾರಿ ಮುಗಿಸಲಾಗಿದೆ. ಕಟ್ಟಡಕ್ಕೆ ಯಾವುದೇ ಸೆಟ್ ಬ್ಯಾಕ್ ಇರಲಿಲ್ಲ. ಆದರೂ ಜಾಗದ ಮಾಲಕರು ಹಾಗೂ ಕಾಮಗಾರಿ ನಡೆಸುವವರು ಕಾನೂನಿನ ಲೋಪ ಮಾದಿಕೊಂಡು ಎನ್ ಓಸಿ ಪಡೆದಿದ್ದರು. ಕಟ್ಟಡದ ಅಡಿಭಾಗದಲ್ಲಿ ಪಾರ್ಕಿಂಗ್ ಮಾಡಿ, ಸುತ್ತ ತಡೆಗೋಡೆ ಕಾಮಗಾರಿ ನಡೀತಾ ಇತ್ತು. ಇದರಿಂದಾಗಿ ಕಟ್ಟಡಕ್ಕಾಗಿ 20 ಅಡಿಗೂ ಹೆಚ್ಚು ಆಳ ಕೊರೆದಿದ್ದಲ್ಲದೆ, ಸುತ್ತ ಮಣ್ಣು ಕುಸಿಯದಂತೆ ತಡೆಗೋಡೆ ರಚಿಸಲಾಗುತ್ತಿತ್ತು. ಆದರೆ, ತಡೆಗೋಡೆ ಭಾಗದಲ್ಲಿಯೇ ಮಣ್ಣು ಕುಸಿದು ಬಿದ್ದಿದೆ. ಕಟ್ಟಡದ ಪಕ್ಕದಲ್ಲಿದ್ದ ರಸ್ತೆಯ ಭಾಗ ಕುಸಿದಿದ್ದು, ಈ ವೇಳೆ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಭೀಮಣ್ಣ ಮತ್ತು ಪಶ್ಚಿಮ ಬಂಗಾಳ ಮೂಲದ ಮಸೂದ್ ಮೃತಪಟ್ಟಿದ್ದಾರೆ. ಇನ್ನೊಬ್ಬ ಕಾರ್ಮಿಕ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ಪಾಲಿಕೆ ಆಯುಕ್ತರು ವರದಿ ಕೇಳಿದ್ದು,ಕಟ್ಟಡದ ಕಾಮಗಾರಿ ಸ್ಥಗಿತಗೊಳಿಸಿ ಮಾಲಕರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ.
ಮಂಗಳೂರು ನಗರದಲ್ಲಿ ಹೀಗೆ ಸೆಟ್ ಬ್ಯಾಕ್ ಇಲ್ಲದೆ ನಿರ್ಮಾಣ ಹಂತದ ಕಟ್ಟಡಗಳು ಹಲವಾರು ಇದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೊಡು ಕೊಳ್ಳುವಿಕೆ ಕಾರಣದಿಂದ ನಿರಾತಂಕವಾಗಿ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣದಿಂದ ನಗರದಲ್ಲಿ ಈಗ ದುರ್ಘಟನೆ ನಡೆದು ಹೋಗಿದ್ದು, ಇಬ್ಬರು ಮೃತಪಟ್ಟ ಘಟನೆ ಬಗ್ಗೆ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ತನಿಖೆಗೆ ಸೂಚನೆ ನೀಡಿದ್ದಾರೆ.
ಈಗ ಕಟ್ಟಡದ ಬಳಿಯಿರುವ ಹಳೇ ಕಟ್ಟಡಕ್ಕೂ ಅಪಾಯ ಎದುರಾಗಿದೆ. ಅಧಿಕಾರಿಗಳು ಎನ್ ಓಸಿ ನೀಡಿರುವ ವಿಚಾರದಲ್ಲಿ ಈಗ ಪೊಲೀಸರು ತನಿಖೆ ನಡೆಸಬೇಕಾಗಿದೆ. ಹಾಗೂ ಮಂಗಳೂರಿನಲ್ಲಿರುವ ಅವೈಜ್ಞಾನಿಕ ಕಟ್ಟಡ ಕಾಮಗಾರಿಗಳ ಬಗ್ಗೆಯೂ ತನಿಖೆ ಆಗಬೇಕಾಗಿದ್ದು, ಅವುಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯತೆ ಇದೆ.