ಕಾಪು, ಫೆ 28 (DaijiworldNews/SM): ತಂದೆ ಹಾಗೂ ಮಗನ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಲ್ಲಿನ ಮಟು ಸಮುದ್ರ ತೀರದಲ್ಲಿ ನಡೆದಿದೆ. ಮೃತದೇಹಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಗುರುತು ಪತ್ತೆ ಅಸಾಧ್ಯವಾಗಿದೆ. ತೊಕ್ಕೊಟ್ಟು ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾದ ತಂದೆ ಮಗನ ಮೃತದೇಹ ಎನ್ನಲಾಗುತ್ತಿದ್ದು, ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಶುಕ್ರವಾರ ಸಂಜೆ ಸಮುದ್ರ ತೀರದಲ್ಲಿ ಮೃತದೇಹಗಳನ್ನು ಗಮನಿಸಿದ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಕಾಪು ಠಾಣಾ ಪೊಲೀಸರು ದೌಡಾಯಿಸಿದ್ದಾರೆ. ಹಾಗೂ ಮೃತದೇಹಗಳನ್ನು ಸ್ಥಳದಿಂದ ಆಸ್ಪತ್ರೆಗೆ ರವಾನಿಸಿ ಶವಾಗಾರದಲ್ಲಿ ಇರಿಸಿದ್ದಾರೆ. ಈ ಮೃತದೇಹಗಳು ತೊಕ್ಕೊಟ್ಟು ಸೇತುವೆ ಬಳಿಯಿಂದ ನಾಪತ್ತೆಯಾದ ತಂದೆ ಮಗನ ಮೃತದೇಹ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಗುರುತು, ಸಾಕ್ಷ್ಯ ಸಿಕ್ಕಿಲ್ಲ.
ಇನ್ನು ಮಾಹಿತಿ ದೊರೆತಾಕ್ಷಣ ಕಾಪು ಠಾಣಾ ಪೊಲೀಸರು ಕೊಣಾಜೆ ಠಾಣಾ ಪೊಲೀಸರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆ. ಅದರಂತೆ, ಆ ಕುಟುಂಬ ಸದಸ್ಯರೊಂದಿಗೆ ಕೊಣಾಜೆ ಠಾಣಾ ಪೊಲೀಸರು ಕಾಪುವಿನತ್ತ ತೆರಳಿದ್ದಾರೆ. ಕುಟುಂಬಸ್ಥರು ಪರಿಚಯ ಹಿಡಿದ ಬಳಿಕವಷ್ಟೇ ಈ ಮೃತದೇಹಗಳು ಅವರದೇ ಎಂದು ಸ್ಪಷ್ಟಪಡಿಸಬಹುದಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇನ್ನು ಬಂಟ್ವಾಳ ಬಾಳ್ತಿಲ ನಿವಾಸಿ ಗೋಪಾಲಕೃಷ್ಣ ರೈ (55) ಮತ್ತು ಪುತ್ರ ನಮೀಶ್ ರೈ( 6) ಫೆ.16 ನಸುಕಿನ ಜಾವದಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಮುಂಬೈನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಗೋಪಾಲಕೃಷ್ಣ ರೈ ಇವರು ಪತ್ನಿ ಪಾವೂರುಗುತ್ತು ಮನೆ ಸಮೀಪ ನಡೆಯುತ್ತಿದ್ದ ಗ್ರಾಮದ ಪೈಚಿಲ್ ನೇಮಕ್ಕೆಂದು ಮುಂಬೈನಿಂದ ಊರಿಗೆ ಆಗಮಿಸಿದ್ದರು. ನೇಮ ವೀಕ್ಷಿಸುತ್ತಿದ್ದ ಗೋಪಾಲಕೃಷ್ಣ ಅವರು ತಡರಾತ್ರಿ ಪುತ್ರನ ಜತೆಗೆ ಕಾರಿನಲ್ಲಿ ತೆರಳಿ ನಾಪತ್ತೆಯಾಗಿದ್ದರು.
ಪತ್ನಿ ಅಶ್ವಿನಿ ರೈ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇದೇ ಸಂದರ್ಭ ನೇತ್ರಾವತಿ ಸೇತುವೆಯಲ್ಲಿ ಗೋಪಾಲಕೃಷ್ಣ ರೈ ಅವರು ತೆರಳಿದ್ದ ವ್ಯಾಗನಾರ್ ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ಎಂಟು ಪುಟಗಳ ಡೆತ್ ನೋಟ್, ಪುತ್ರನ ಚಪ್ಪಲಿ, ಆರು ಸಾವಿರ ನಗದು ಹಾಗೂ ಮದ್ಯದ ಬಾಟಲಿ ಪತ್ತೆಯಾಗಿತ್ತು. `ಪುತ್ರನನ್ನು ಕೊಂದ ಪಾಪಿ ತಾನು, ಪತ್ನಿಗೆ ದ್ರೋಹ ಎಸಗುತ್ತಿದ್ದೇನೆ. ಇತರೆ ಹಲವು ವಿಚಾರಗಳನ್ನು ಬರೆದ ಎಂಟು ಪುಟಗಳುಳ್ಳ ಡೆತ್ ನೋಟ್ ಕಾರಿನ ಡ್ಯಾಷ್ ಬೋರ್ಡಿನಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆ ನಡೆಸಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ಐದು ದಿನಗಳ ಕಾಲ ಸ್ಥಳೀಯ ಈಜುಗಾರರು, ದೋಣಿ ಮಾಲೀಕರು, ಕೋಸ್ಟ್ ಗಾರ್ಡ್, ಅಗ್ನಿ ಶಾಮಕ ಸಿಬ್ಬಂದಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.