ಮಂಗಳೂರು, ಫೆ 28 (DaijiworldNews/SM): ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ಪಕ್ಷಗಳ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ಗರಂ ಆಗಿದ್ದು, ಈ ಎರಡು ಪಕ್ಷಗಳು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ.
ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಉಪ ಮೇಯರ್ ಆಯ್ಕೆಯ ಸಂಧರ್ಭ ಕಾಂಗ್ರೇಸ್ ಪಕ್ಷದಿಂದ ಚುನಾಯಿತರಾದ ಜೀನತ್ ಶಂಶುದ್ದೀನ್ ಪರವಾಗಿ ಎಸ್.ಡಿ.ಪಿ.ಐ ಸದಸ್ಯರು ಮತ ಚಲಾಯಿಸಿದ್ದಾರೆ. ಚುನಾವಣೆ ಬಂದಾಗ ನಮಗೂ ಅವರಿಗೂ ಸಂಬಂಧವೇ ಇಲ್ಲವೆನ್ನುವ ಕಾಂಗ್ರೇಸ್ ಮುಖಂಡರು ಎಸ್.ಡಿ.ಪಿ.ಐ ಜೊತೆಗಿನ ಒಳ ಒಪ್ಪಂದದ ಕುರಿತು ಮೌನ ಮುರಿಯಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ನಮಗೂ ಅವರಿಗೂ ಸಂಬಂಧವೇ ಇಲ್ಲವೆನ್ನುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಬದಲು ನೇರವಾಗಿ ತಮ್ಮ ರಾಜಕೀಯ ಒಳ ಒಪ್ಪಂದದ ಕುರಿತು ಸಾರ್ವಜನಿಕವಾಗಿ ಒಪ್ಪಿಕೊಂಡು ಚುನಾವಣಾ ಕಣಕ್ಕಿಳಿಯಬೇಕು. ಅದಲ್ಲದೆ ಜನರ ಮುಂದೆ ಬೇರೆ ಬೇರೆಯಾಗಿ ಚುನಾವಣೆ ಎದುರಿಸಿ ಅಧಿಕಾರದ ಅಭಿಲಾಸೆಯಿಂದ ಒಂದಾಗುವ ನಾಟಕೀಯ ಬೆಳವಣಿಗೆಗಳು ಕಾಂಗ್ರೇಸ್ ಮುಖಂಡರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.