ಕಾಣಿಯೂರು, ಫೆ 29 (Daijiworld News/MB) : ಪೋಲಿಸರೆಂದರೆ ಕೇವಲ ಕಳ್ಳರಿಗೆ, ಭ್ರಷ್ಟರಿಗೆ, ಕೊಲೆ ಪಾತಕಿಗಳಿಗೆ, ಅತ್ಯಾಚಾರಿಗಳಿಗೆ ಒಟ್ಟಿನಲ್ಲಿ ಹೇಳುವುದಾದರೆ ಅಪರಾಧ ಮಾಡುವವರನ್ನು ಮಟ್ಟ ಹಾಕಲು ಶ್ರಮಿಸುತ್ತಿರುತ್ತಾರೆ. ಈ ನಡುವೆ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಶಾಲೆಯಿಂದ ಹೊರ ಉಳಿದ ಮೂರು ಮಕ್ಕಳನ್ನು ಮನವೊಲಿಸಿ ಶಾಲೆಗೆ ಸೇರಿಸಿ ಮಾದರಿ ಕೆಲಸವೊಂದನ್ನು ಮಾಡಿದ್ದಾರೆ.
ಇವರ ಹೆಸರು ಭವಿತ್ ರೈ. ಕಡಬ ಠಾಣೆಯ ಪೋಲೀಸ್ ಸಿಬ್ಬಂದಿ. ಕಳೆದ ಕೆಲವು ಸಮಯಗಳಿಂದ ಕಾಣಿಯೂರು ಗ್ರಾ.ಪಂ ವ್ಯಾಪ್ತಿಯ ಚಾರ್ವಾಕದ ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆಯ ಇಬ್ಬರು ಮಕ್ಕಳು ಶಾಲೆಯಿಂದ ದೂರ ಉಳಿದಿದ್ದರು. ಶಾಲಾ ಮುಖ್ಯ ಶಿಕ್ಷಕಿಯವರು ಹಲವು ಬಾರಿ ಮನೆಗೆ ತೆರಳಿ ಮಕ್ಕಳು ಶಾಲೆಗೆ ಬರುವಂತೆ ನಿರಂತರವಾಗಿ ಹೆತ್ತವರಿಗೆ ತಿಳಿ ಹೇಳಿದ್ದರು. ಆದರೆ ಮಕ್ಕಳು ಶಾಲೆಗೆ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಾಲಾ ಮುಖ್ಯಸ್ಥರು ಕಡಬ ಠಾಣೆಗೆ ದೂರು ನೀಡಿದ್ದರು.
ಚಾರ್ವಾಕ ಬೀಟ್ ಪೋಲೀಸ್ ಭವಿತ್ರವರು ಶಾಲೆಯಿಂದ ಹೊರ ಉಳಿದ ಮಕ್ಕಳ ಮನೆಗೆ ತೆರಳಿ ಹೆತ್ತವರಿಗೆ ಶಿಕ್ಷಣ ಅಗತ್ಯದ ಅರಿವು ಮೂಡಿಸಿದಲ್ಲದೆ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಯಲ್ಲಿರುವ ಸವಲತ್ತು ಮತ್ತು ವಿದ್ಯಾಭ್ಯಾಸದ ಅವಕಾಶಗಳನ್ನು ವಿವರಿಸಿದ್ದಾರೆ. ನೀವು ಹೆಚ್ಚು ಓದಿ ಉದ್ಯೋಗಕ್ಕೆ ಸೇರಿ ನನ್ನಂತೆಯೇ ಖಾಕಿ ಧರಿಸಿ ಲಾಠಿ ಹಿಡಿದು ಬರಬೇಕು ಎಂದು ಪೊಲೀಸ್ ಸೇವೆಯ ಅಗತ್ಯವನ್ನು ವಿವರಿಸಿ ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ.
ಇದರಿಂದ ಸಂತೋಷಗೊಂಡ ಮಕ್ಕಳು ಶಾಲೆಗೆ ಹೋಗಲು ನಿರ್ಧರಿಸಿದ್ದು, ಅದರಂತೆ ವಿದ್ಯಾರ್ಥಿಗಳಾದ ಸುಶ್ಮಿತಾ ಮತ್ತು ಪ್ರಮೋದ್ ಹಾಗೂ ಸುಜಿತ್ ಶುಕ್ರವಾರದಂದೇ ಮತ್ತೆ ಶಾಲೆಯ ಮೆಟ್ಟಿಲೇರಿದ್ದಾರೆ. ಭವಿತ್ರವರಿಗೆ ಮುಖ್ಯ ಶಿಕ್ಷಕಿ ಪಾರ್ವತಿ ಶಾಲಾ ಅಭಿವೃದ್ದಿ ಸಮಿತಿಯವರು, ಶಿಕ್ಷಕರಾದ ಶಂಕರ, ನಯನಾಕುಮಾರಿ, ಸಹಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಭವಿತ್ ರೈ, "ಮಕ್ಕಳಿಗೆ ಶಿಕ್ಷಣದ ಬಗ್ಗೆ ವಿವರಿಸಿದಲ್ಲದೆ ನಿಮ್ಮಂತೆ ಮಕ್ಕಳು ಕೂಲಿ ಕೆಲಸ ಮಾಡಿ ಬದುಕಬಾರದು, ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಹೆತ್ತವರಿಗೆ ವಿಷಯ ಮನವರಿಕೆ ಮಾಡಿದ್ದೇನೆ. ಇಂತಹ ಕೆಲಸ ಪ್ರತಿಯೊಬ್ಬರು ಮಾಡಬೇಕು" ಎಂದಿದ್ದಾರೆ.
ಒಟ್ಟಿನಲ್ಲಿ ಪೋಲೀಸ್ ಸಿಬ್ಬಂದಿಯ ಈ ಕೆಲಸ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.