ಮಂಗಳೂರು, ಫೆ 29 (Daijiworld News/MB): ಪತ್ನಿಯ ಶೀಲ ಶಂಕಿಸಿ ಆಕೆಯನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಿದವ ಪತಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಾಣಾಚಾರ್ಯ ಅವರು ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.
ಮೂಲತಃ ಬಾಗಲಕೋಟೆಯ ಕೆಲ್ಲೂರು ನಿವಾಸಿ, ದೇರೆಬೈಲ್ ಕೊಂಚಾಡಿ ಗ್ರಾಮದ ಬೋರುಗುಡ್ಡೆಯಲ್ಲಿ ವಾಸವಿದ್ದ ಶರಣಪ್ಪ ಬಾಳಪ್ಪ (48) ಶಿಕ್ಷೆಗೊಳಗಾದವ. ಈತ ಪತ್ನಿ ಮಂಜುಳಾ (38) ಅವರನ್ನು2019 ರ ಎ.20 ರಂದು ಹತ್ಯೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಶರಣಪ್ಪ - ಮಂಜುಳಾ ಕುಟುಂಬ ಬೋರುಗುಡ್ಡೆಯಲ್ಲಿ ವಾಸವಿದ್ದು, ಪತ್ನಿಯ ಹೆಸರಲ್ಲಿ ಸ್ವಂತ ಮನೆಯಿದೆ. ಈ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು ಮೊದಲ ಪುತ್ರಿಗೆ ವಿವಾಹವಾಗಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಉಳಿದ ಮೂವರು ಪುತ್ರಿಯರು ಉಡುಪಿಯಲ್ಲಿರುವ ಅಜ್ಜಿಯ ಮನೆಗೆ ಹೋಗಿದ್ದರು.
ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು.
2019 ರ ಎ. 20 ರಂದು ಆರೋಪಿ ತನ್ನ ಪತ್ನಿಯನ್ನು ಬೆಡ್ರೋಮ್ನಲ್ಲಿ ಹತ್ಯೆ ಮಾಡಿದ್ದು ಬೊಬ್ಬೆ ಕೇಳಿ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಕಾವೂರು ಎಸ್ಐ ಹರೀಶ್ ಪ್ರಕರಣ ದಾಖಲಿಸಿಕೊಂಡು, ಕಾವೂರು ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್. ನಾಯಕ್ ಆರೋಪ ಆರೋಪ ಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗೆ ಹಾಲಿ ಇನ್ಸ್ಪೆಕ್ಟರ್ ರಾಘವ ಪಡೀಲ್ ಅವರು ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 18 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ.
ತಾಯಿ ಹತ್ಯೆಯಾಗಿ ತಂದೆ ಜೈಲಿನಲ್ಲಿರುವ ಕಾರಣದಿಂದಾಗಿ ಮೂವರು ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನಿಡಲು ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ.ಪ್ರಸ್ತುತ ಮಕ್ಕಳು ಅಜ್ಜಿ ಮನೆಯಲ್ಲಿದ್ದಾರೆ.
ಮೊದಲು ಸರಕಾರಿ ಅಭಿಯೋಜಕ ಶೇಖರ ಶೆಟ್ಟಿ ಹಾಗೂ ತೀರ್ಪು ಪ್ರಕಟನೆಯ ಸಂದರ್ಭದಲ್ಲಿ ಹರಿಶ್ಚಂದ್ರ ಉದ್ಯಾವರ ಅವರು ಸರಕಾರದ ಪರವಾಗಿ ವಾದಿಸಿದ್ದರು.