ಬಂಟ್ವಾಳ, ಫೆ 29(Daijiworld News/MB): ವಿವಾಹ ಸಂಭ್ರಮದ ಜೊತೆಗೆ ದೇಶ ಕಾಯುವ ಯೋಧರಿಗೆ ಸನ್ಮಾನ ಮಾಡಿರುವ ಅಪರೂಪದ ಘಟನೆ ತಾಲೂಕಿನ ಮುಡಿಪು ಗ್ರಾಮದಲ್ಲಿ ನಡೆದಿದೆ.
ಧೃತಿ ಮತ್ತು ಉತ್ತಮ ಎಂಬಾ ಜೋಡಿಯ ವಿವಾಹವಾಗಿದ್ದು ಆರತಕ್ಷತೆ ಕಾರ್ಯಕ್ರಮದಲ್ಲಿ 16 ಜನರು ಮಾಜಿ ಸೈನಿಕರಿಗೆ ಸನ್ಮಾನ ಮಾಡಿ ಗೌರವ ನೀಡುವುದರ ಮೂಲಕ ಮಾದರಿಯಾಗಿದ್ದಾರೆ.
"ಸಿಪಾಯಿಗಳಿಗೆ ಗೌರವ ಕೊಡುವಂತ ಕಾರ್ಯ ಮಾಡಿದ್ದೇವೆ. ನಾವು ಮನೆಯಲ್ಲಿ ನಿಶ್ಚಿಂತೆಯಿಂದ ಮಲಗುವುದು ನಮ್ಮ ದೇಶ ಕಾಯುವ ಯೋಧರಿಂದಾಗಿ. ನಮ್ಮ ದೇಶದ ಮೇಲೆ ನಿರಂತರವಾಗಿ ನಡೆಯುವ ದಾಳಿಯಿಂದಾಗಿ ನಮ್ಮನ್ನು ಕಾಪಾಡಲು ಯೋಧರಿಂದ ಮಾತ್ರ ಸಾಧ್ಯ" ಎಂದು ವಿವಾಹ ಮನೆಯವರಾದ ರಾಜರಾಮ್ ಹೇಳಿದ್ದಾರೆ.
ಸಂಬಂಧಿ ಸಹಧಾರಿವಿ ಎಂಬ ಯುವತಿ ಮಾತನಾಡಿ, "ಈ ರೀತಿಯ ಕಾರ್ಯಕ್ರಮ ಎಲ್ಲಿಯೂ ನಡೆದಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಟ್ರೆಂಡ್ ಸೆಟ್ಟಿಂಗ್ ರೀತಿಯಾದ್ದಾಗಿದೆ. ಬೇರೆ ರೀತಿಯ ವಿವಾಹಗಳನ್ನು ನಾವು ನೋಡಿದ್ದೇವೆ. ಆದರೆ ಇದು ಹೊಸದಾದ ರೀತಿಯ ವಿವಾಹ. ಇದರಿಂದಾಗಿ ಇಲ್ಲ ಬಂದಿರುವ ಸಣ್ಣ ಮಕ್ಕಳಿಗೆ ಯುವಕರಿಗೆ ಸ್ಪೂರ್ತಿಯಾಗುತ್ತದೆ" ಎಂದಿದ್ದಾರೆ.
ಮಾಜಿ ಯೋಧ ಮೋಜಿನ್ ಭಟ್ ಮಾತನಾಡಿ, "ಸೈನ್ಯದವರನ್ನು ಗುರುತಿಸಿ ಸನ್ಮಾನ ಮಾಡಿದರಿಂದ ಎಲ್ಲರಿಗೂ ಧನ್ಯವಾದಗಳು. ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಯೋಧರ ಬಗ್ಗೆ ಮಾಹಿತಿಗಳು ತಿಳಿದು ಬರುತ್ತದೆ. ಆದರೆ ಈ ರೀತಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರ ಬಗ್ಗೆ ಮಾಹಿತಿ ತಿಳಿಯುವುದು ಸೈನ್ಯದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಸೈನ್ಯಕ್ಕೆ ಸೇರುವ ಬಗ್ಗೆ ಯುವಕರಿಗೆ ಮಾಹಿತಿ ದೊರೆಯುತ್ತದೆ. ಅಲ್ಲದೇ ನಮ್ಮ ಸೈನ್ಯಕ್ಕೆ ಈ ಪ್ರದೇಶದಿಂದ ಇನ್ನಷ್ಟು ಜನ ಸೇರಬೇಕು. ಎಲ್ಲರಿಗೂ ಸೈನ್ಯದಲ್ಲಿ ಬಹಳ ಒಳ್ಳೆಯ ಅವಕಾಶವಿದೆ" ಎಂದು ತಿಳಿಸಿದ್ದಾರೆ.
ಈ ಉತ್ತಮ ಕಾರ್ಯದೊಂದಿಗೆ ಉತ್ತಮ ಮತ್ತು ಧೃತಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ತಮ್ಮ ವಿವಾಹ ಸಮಾರಂಭದಲ್ಲಿ ದೇಶವನ್ನು ಕಾಯುವ ವೀರ ಯೋಧರಿಗೆ ಗೌರವ ನೀಡಿದ ಇವರಿಗೆ ಪ್ರಶಂಸೆ ವ್ಯಕ್ತವಾಗಿದೆ.