ಮಂಗಳೂರು, ಫೆ 29(Daijiworld News/MB) : ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ನಿರ್ಮಾಣ ಹಂತದ ಬಹು ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಯ ಸಂದರ್ಭ ನಡೆದ ಅವಘಡದಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದು, ಈ ಅವಘಡಕ್ಕೆ ಕಟ್ಟಡ ಮಾಲಕರು, ಗುತ್ತಿಗೆದಾರರು , ನಗರ ಪಾಲಿಕೆ ಅಧಿಕಾರಿಗಳ ಅಪವಿತ್ರ ಮೈತ್ರಿ ನೇರ ಕಾರಣವಾಗಿದೆ. ಈ ಕುರಿತು ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಾಣ ಕಳೆದು ಕೊಂಡ ಬಡ ವಲಸೆ ಕಾರ್ಮಿಕರ ಕುಟುಂಬಗಳಿಗೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪದೇ ಪದೆ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ಅವಘಡಗಳು ಸಂಭವಿಸುತ್ತಿವೆ. ಹತ್ತಾರು ಜನ ಕಟ್ಟಡ ಕಾರ್ಮಿಕರು ಇಂತಹ ದುರಂತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಕುರಿತು ಸರಿಯಾದ ತನಿಖೆ ನಡೆಸದೆ ಬಹುತೇಕ ಪ್ರಕರಣಗಳನ್ನು ಮುಚ್ವಿಹಾಕಲಾಗಿದೆ. ಇಂತಹ ಅವಘಡಗಳು ಪದೇ ಪದೆ ಮರುಕಳಿಸಲು ಬಿಲ್ಡರ್ ಗಳು, ಗುತ್ತಿಗೆದಾರರು, ಸರಕಾರಿ ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿ ಹಾಗೂ ನಿರ್ಲಜ್ಜ ಭ್ರಷ್ಟಾಚಾರ ನೇರ ಕಾರಣ. ಯಾವುದೇ ರೀತಿಯಲ್ಲಿ ನಿಯಮಗಳನ್ನು ಪಾಲಿಸದೆ, ಅಡ್ಡಾದಿಡ್ಡಿಯಾಗಿ ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸುವುದು, ಅವೈಜ್ಞಾನಿಕವಾಗಿ ಭೂಮಿಯನ್ನು ಸಮತಟ್ಟುಗೊಳಿಸುವುದು ಇಂತಹ ದುರಂತಗಳಿಗೆ ಕಾರಣ. ನಗರ ಪಾಲಿಕೆ, ನಗರಾಭಿವೃಧಿ ಪ್ರಾಧಿಕಾರದ ಅಧಿಕಾರಿಗಳ ನೇರ ಶಾಮಿಲಾತಿಯಿಂದ ಇಂತಹ ಅಕ್ರಮಗಳು ನಡೆಯುತ್ತಿದ್ದು, ಈ ಅಕ್ರಮಗಳ ವಿರುದ್ದ ಧ್ವನಿ ಎತ್ತಿದವರನ್ನು ಬಿಲ್ಡರ್ ಲಾಬಿ, ಅಧಿಕಾರಿಗಳು ಬಲವಂತವಾಗಿ ಬಾಯಿ ಮುಚ್ವಿಸುತ್ತಾರೆ. ಈ ರೀತಿಯ ಅವಘಡದಲ್ಲಿ ಪದೇ ಪದೆ ಹೊರ ಜಿಲ್ಲೆ, ಹೊರ ರಾಜ್ಯದ ಬಡಪಾಯಿ ವಲಸೆ ಕಟ್ಟಡ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಬಡ ಕಾರ್ಮಿಕರ ಕುಟುಂಬಗಳ ಪರ ಯಾರೂ ಧ್ವನಿ ಎತ್ತುವವರಿಲ್ಲದೆ ಯಾವುದೇ ಪರಿಹಾರ ನೀಡದೆ ಪ್ರಕರಣವನ್ನು ಮುಚ್ವಿ ಹಾಕಲಾಗುತ್ತದೆ. ಪ್ರಾಣ ಕಳೆದು ಕೊಂಡ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುತ್ತವೆ.
ಇಂದು ಕರಂಗಲಪಾಡಿಯಲ್ಲಿ ನಡೆದ ಅವಘಡಲ್ಲಿಯೂ ಇಬ್ಬರು ವಲಸೆ ಕಾರ್ಮಿಕರು ಪ್ರಾಣ ಕಳೆದು ಕೊಂಡಿದ್ದಾರೆ. ಕಾಮಗಾರಿ ಸಂದರ್ಭ ಸ್ಥಳೀಯರು ನಿಯಮ ಉಲ್ಲಂಘನೆಯ ಕುರಿತು ದೂರು ನೀಡಿದ್ದರೂ, ಪ್ರಭಾವಿ ಬಿಲ್ಟರ್ ಗಳು ಅಧಿಕಾರಿಗಳ ಶಾಮಿಲಾತಿಯಿಂದ ದೂರುಗಳನ್ನು ಕಡೆಗಣಿಸಿದ್ದರು ಎಂಬ ಆರೋಪವಿದೆ. ಕರಂಗಲಪಾಡಿಯ ದುರಂತದ ಕುರಿತು ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಪ್ರಾಣ ಕಳೆದು ಕೊಂಡ ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.