ಮಂಗಳೂರು, ಫೆ.29 (DaijiworldNews/PY) : ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ತ್ಯಾಜ್ಯ ಕುಸಿತದಿಂದ ಸಂಭವಿಸಿದ ಅನಾಹುತಗಳಿಗೆ ಸಂಬಂಧಿಸಿದಂತೆ ನಿರ್ಮಾಣ ಕಾರ್ಯವನ್ನು ಮುಂದಿನ ವಾರದಿಂದಲೇ ಪ್ರಾರಂಭಿಸಿ ಮಾಹಿತಿ ನೀಡುವಂತೆ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಚ್ಚನಾಡಿ ಲ್ಯಾಂಡ್ಫಿಲ್ ಘಟಕಕ್ಕೆ ಶನಿವಾರ ಭೇಟಿ ನೀಡಿದ ಸಚಿವರು, ನಿರ್ಮಾಣ ಕಾರ್ಯವನ್ನು ಮುಂದಿನ ವಾರದಿಂದಲೇ ಆರಂಭಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಅಲ್ಲದೇ, "ಸಂತ್ರಸ್ತರಿಗೆ ಸೂಕ್ತವಾದ ಪರಿಹಾರ ನೀಡಲಾಗುತ್ತಿದೆಯೇ" ಎಂದು ಮನಪಾ ಹಾಗೂ ಅಧಿಕಾರಿಗಳಲ್ಲಿ ಕೇಳಿದರು.
ಈ ಸಂದರ್ಭ ಸಂತ್ರಸ್ತರೊಬ್ಬರು ಸಚಿವರಲ್ಲಿ ಮಾತನಾಡಿ, "ಯಾವೊಬ್ಬ ಅಧಿಕಾರಿಗಳು ಈ ಪ್ರದೇಶದ ಕಾಮಗಾರಿಯ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪದೇ ಪದೇ ಭರವಸೆಯನ್ನು ನೀಡುತ್ತಾರೆಯೇ ಹೊರತು, ಯಾವುದೇ ಪರಿಹಾರವನ್ನು ನೀಡುತ್ತಿಲ್ಲ" ಎಂದು ತಿಳಿಸಿದರು.
ಮಂದಾರದ ನಿವಾಸಿ ಗಣೇಶ್ ಅವರು ಮಾತನಾಡಿ, "ತ್ಯಾಜ್ಯ ಕುಸಿತದ ಪ್ರದೇಶದಲ್ಲಿ ಇತ್ತೀಚೆಗೆ ಸಮೀಕ್ಷೆ ನಡೆಸಲಾಗಿತ್ತು. ಆದರೆ, ಆ ಸಮೀಕ್ಷೆ ಸರಿಯಾಗಿಲ್ಲ. ತ್ಯಾಜ್ಯ ಕುಸಿತದಿಂದ ಇಲ್ಲಿ ಒಂದು ಮನೆ ಮಾತ್ರ ನೆಲ ಸಮವಾಗಿದೆ. ಹಾಗಿದ್ದರೂ, ಕೆಲವರಿಗೆ ಮನೆ ಮಂಜೂರು ಮಾಡಲಾಗಿದೆ. ಪರಿಹಾರದಲ್ಲಿ ತಾರತಮ್ಯವಾಗಿದೆ. ಆದ್ದರಿಂದ ಪರಿಹಾರಕ್ಕಾಗಿ ಹೊಸ ಸಮೀಕ್ಷೆ ಮಾಡಬೇಕು" ಎಂದು ಒತ್ತಾಯಿಸಿದರು.
ಮಂದಾರ ರಾಜೇಶ್ ಭಟ್ ಅವರು ಮಾತನಾಡಿ, ಈ ಪ್ರದೇಶಕ್ಕೆ ಕಾಮಗಾರಿ ಅಭಿವೃದ್ದಿ ಹಾಗೂ ಯೋಜನೆಗಳ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡುತ್ತಾರೆ. ಆದರೆ ಈ ವಿಚಾರವಾಗಿ ಸ್ಥಳೀಯರೊಂದಿಗೆ ಸರಿಯಾಗಿ ಸಂವಹನ ನಡೆಸುವುದಿಲ್ಲ. ಹಾಗಾಗಿ ಈ ವಿಚಾರದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ. ಆಡಳಿತವು ನಮಗೆ ಕುಲಶೇಖರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಆಶ್ರಯ ನೀಡಿದೆ. ಆದರೆ, ನಮ್ಮ ಸಮಸ್ಯೆಗೆ ಶಾಶ್ವತವಾದ ಪರಿಹಾರ ಸಿಗಲೇಬೇಕು ಎಂದು ತಿಳಿಸಿದರು.
ಸಂತ್ರಸ್ತರ ಮೊರೆ ಆಲಿಸಿದ ಸಚಿವರು, ಶೀಘ್ರವೇ ನಿರ್ಮಾಣ ಕಾಮಗಾರಿಯನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಅನಗತ್ಯವಾಗಿ ಈ ವಿಷಯವನ್ನು ಮುಂದಕ್ಕೆ ಹಾಕಬಾರದು, ಸಂತ್ರಸ್ತರಿಗೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದರು. ಕಾಮಗಾರಿ ಕಾರ್ಯವನ್ನು ವೀಕ್ಷಿಸಲು ಮುಂದಿನ ತಿಂಗಳು ಆಗಮಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭ, ಮೇಯರ್ ದಿವಾಕರ್ ಪಾಂಡೇಶ್ವರ, ಶಾಸಕರಾದ ಡಾ.ಭರತ್ ಶೆಟ್ಟಿ, ವೇದಾವ್ಯಸ ಕಾಮತ್ ಹಾಗೂ ಮ.ನ.ಪಾ. ಆಯುಕ್ತ ಶಾನಡಿ ಅಜಿತ್ ಕುಮಾರ್ ಉಪಸ್ಥಿತರಿದ್ದರು.