ಬೆಂಗಳೂರು, ಫೆ 13: ಮಹಾ ಶಿವರಾತ್ರಿಯ ಹಿನ್ನೆಲೆ ಮಸಣವಾಸಿಯಾದ ಶಿವನನ್ನು ಆರಾಧಿಸಲು ಯುವಾ ಬ್ರಿಗೇಡ್ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ರಾಜಾಜಿನಗರದ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಸಂಜೆ 4 ಗಂಟೆಗೆ ವೀರಬಾಹು ಎಂಬ ವಿಶೇಷ ಮತ್ತು ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಖರ ವಾಗ್ಮಿ, ಯುವಾ ಬ್ರಿಗೆಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ವಿನೂತನ ರೀತಿಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.
ದೇವರ ದೇವ ಮಹಾದೇವ ಸ್ಮಶಾನವಾಸಿ. ಪ್ರತಿಯೊಬ್ಬರ ಬದುಕಿನ ಯಾತ್ರೆಯ ಆರಂಭಕ್ಕೆ ಪರಶಿವನೇ ಕಾರಣ. ಹೀಗಾಗಿ ಅಂತ್ಯವು ಕೂಡ ಅವನೊಳಗೇ ಇರುತ್ತದೆ. ಹಾಗಾಗಿ ಸ್ಮಶಾನ ಯಾತ್ರೆ ಅತ್ಯಂತ ಪ್ರಮುಖವಾದದ್ದು. ನಮ್ಮೊಳಗಿನ ಭಯವನ್ನು ತೆಗೆದುಹಾಕುವ ಉದ್ದೇಶದಿಂದ ಈ ವಿನೂತನ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವಾ ಬ್ರಿಗೇಡ್ ತಿಳಿಸಿದೆ.