ಮಂಗಳೂರು, ಮಾ.01 (DaijiworldNews/PY) : ಖ್ಯಾತ ಕೊಂಕಣಿ ಬರಹಗಾರರು, ನಾಟಕಗಾರರು ಹಾಗೂ ದಾಯ್ಜಿವರ್ಲ್ಡ್ನ ಸಂಪಾದಕೀಯ ಮುಖ್ಯಸ್ಥರಾಗಿದ್ದ ರಿಚರ್ಡ್ ಜಾನ್ ಪಾಯ್ಸ್ ಅವರು ಕಾನ್ಸರ್ಗೆ ಬಲಿಯಾದರು.
75 ದಿನಗಳಿಂದ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕಾನ್ಸರ್ನಿಂದಾಗಿ ಬಳಲುತ್ತಿದ್ದ ಅವರು ಭಾನುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಕುಟುಂಬಸ್ಥರು ಹಾಗೂ ಸಾವಿರಾರು ಮಂದಿ ಹಿತೈಷಿಗಳನ್ನು ಅಗಲಿದ್ದಾರೆ.
ಆರ್. ಜೆ. ಪಿ. ಎಂದೇ ಪ್ರಸಿದ್ಧರಾಗಿರುವ 51 ವರ್ಷದ ರಿಚರ್ಡ್ ಜಾನ್ ಪಾಯ್ಸ್ ಅವರು ಕೊಂಕಣಿ ಹಾಗೂ ಇಂಗ್ಲೀಷ್ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ.
ರಿಚ್ಚಿಯವರು 2015ರಲ್ಲಿ ಹಿರಿಯ ಸಂಪಾದಕರಾಗಿ ದಾಯ್ಜಿವರ್ಲ್ಡ್ಗೆ ಸೇರಿದ್ದು ಕಳೆದ 2 ವರ್ಷದಿಂದ ಸಂಪಾದಕೀಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ರಿಚ್ಚಿ ಅವರ ಪ್ರಬಂಧಗಳು, ವಿಶೇಷವಾಗಿ ಪ್ರಚಲಿತ ವಿದ್ಯಾಮಾನದ ವಿಡಂಬನಾತ್ಮಕ ಲೇಖನಗಳು ಕೊಂಕಣಿಯಲ್ಲಿ ಹೆಚ್ಚು ಜನಪ್ರಿಯವಾಗಿದ್ದವು. ಅವರ ಸಣ್ಣ ಕಥೆಗಳು ಹಾಗೂ ಕವನಗಳು ಕೊಂಕಣಿ ನಿಯತಕಾಲಿಕಗಳಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದವು. ಕೊಂಕಣಿಯಲ್ಲಿನ ವಿಡಂಬನಾತ್ಮಕ ಪ್ರಬಂಧಗಳ ಸಂಗ್ರಹವಾದ ಅವರ ಮೊದಲ ಪುಸ್ತಕ ಕೊಲೊವೆರಿ 2012ರಲ್ಲ ಪ್ರಕಟವಾಯಿತು. ಅಲ್ಲದೇ ಅವರು ಇನ್ನೂ ಎರಡು ಪುಸ್ತಕಗಳಾದ ವಿದುಷಕ್ ಹಾಗೂ ಫಾಥರ್ ಪುಸ್ತಕಗಳನ್ನು ಪ್ರಕಟಿಸಿದರು. ಜನವರಿ 2020ರಲ್ಲಿ ರಿಚ್ಚಿ ಅವರು ಬರೆದ ಪುಸ್ತಕ ಫಾಥರ್ನಿಂದಾಗಿ ಪ್ರತಿಷ್ಠಿತ ಟಿಎಂಪೈ ಪ್ರಶಸ್ತಿಗೆ ಆಯ್ಕೆಯಾದರು.
ನಾಟಕಕಾರರಾಗಿ ರಿಚ್ಚಿ ಅವರು ಕೊಂಕಣಿವೇದಿಕೆಯಲ್ಲಿ ತಮಗಾಗಿ ಒಂದು ಗೂಡನ್ನು ರಚಿಸಿಕೊಂಡಿದ್ದರು. ಅವರ ನಾಟಕವಾದ ಪಾಂಚ್ ಮೊರ್ನಮ್ ಕೊಂಕಣಿ ರಂಗಭೂಮಿಯಲ್ಲಿ ಟ್ರೆಂಡ್ಸೆಟ್ಟರ್ ಆಗಿ ಮಾರ್ಪಟ್ಟಿತ್ತು. ಇವರ ಎರಡನೇ ನಾಟಕ ತುಮ್ ವೋರ್ಟೊ ದೋನಿಯಾ (ಲಾರ್ಡ್, ಯು ಆರ್ ಗ್ರೇಟ್) ನಾಟಕವು ಹಳೆಯ ಒಡಂಬಡಿಕೆ ಬುಕ್ ಆಫ್ ಜಾಬ್ ಆಧರಿಸಿದ್ದು, ಈ ನಾಟಕ ಕರಾವಳಿಯ ವಿವಿಧ ಕಡೆಗಳಲ್ಲಿ ಹಲವಾರು ಪ್ರದರ್ಶನಗಳನ್ನು ಕಂಡಿತ್ತು. ಅಲ್ಲದೇ ಅದ್ಬುತ ಯಶಸ್ಸನ್ನು ಸಾಧಿಸಿತ್ತು. ಮೃದು ಸ್ವಭಾವದ ಹಾಗೂ ನೇರ ವ್ಯಕ್ತಿತ್ವದ ರಿಚ್ಚಿ ಅವರು, ಬೆಳೆಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು ಅಲ್ಲದೇ ಕೊಂಕಣಿ ನಾಟಕದಲ್ಲಿ ಹೊಸತನವನ್ನು ತಂದಿದ್ದರು.
ಡಿಸೆಂಬರ್ 2019ರ ಮೊದಲ ವಾರದವರೆಗೂ ಆರೋಗ್ಯವಾಗಿದ್ದ ರಿಚ್ಚಿ ಅವರಿಗೆ ಆಸಿಡಿಟಿ ಹಾಗೂ ವಾಂತಿ ಕಾಣಿಸಿಕೊಂಡಿತ್ತು. ಒಂದು ವಾರದ ಬಳಿಕ ವಾಂತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ ಅವರನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಬಳಿಕ ಅವರಿಗೆ ಕಾರ್ಸಿನೋಮ ಮೆಟಾಸ್ಟಾಟಿಕ್ ಜಾಂಡೀಸ್ ಒಂದು ರೀತಿಯ ಕ್ಯಾನ್ಸರ್ ಇರುವುದು ತಿಳಿದುಬಂತು.
ರಿಚ್ಚಿ ಅವರು ಧನಾತ್ಮಕ ಚಿಂತನೆಯಲ್ಲಿ ಹೋರಾಟ ನಡೆಸಿದರು ಹಾಗೂ ಗುಣಮುಖರಾಗುವ ಭರವಸೆ ಹೊಂದಿದ್ದರು. ಕ್ಯಾನ್ಸರ್ ವಿರುದ್ದ ನಡೆಸಿದ ಹೋರಾಟವನ್ನು ವ್ಯಕ್ತಪಡಿಸುವ ಕೆಲವು ಭಾವನಾತ್ಮಕ ಕೊಂಕಣಿ ಕವಿತೆಗಳನ್ನು ಕೂಡಾ ಬರೆದಿದ್ದಾರೆ. ಕಳೆದ ಎರಡು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದು ಭಾನುವಾರ ಮುಂಜಾನೆ 4.30ರ ಸುಮಾರಿಗೆ ನಿಧನರಾದರು.
ರಿಚ್ಚಿ ಅವರು ಕುಟುಂಬದ ಆಧಾರಸ್ತಂಭವಾಗಿದ್ದರು. ಕಳೆದ ವಾರ ದಾಯ್ಜಿವರ್ಲ್ಡ್ನಲ್ಲಿ ಪ್ರಕಟಿಸಿದ ಮನವಿಯ ಬಳಿಕ ದಾಯ್ಜಿವರ್ಲ್ಡ್ನ ಹಲವಾರು ಓದುಗರು ಅವರ ವೈದ್ಯಕೀಯ ಚಿಕಿತ್ಸೆಗೆ ನೆರವಾಗಿದ್ದಾರೆ.
ಮಾ.2 ರ ಸೋಮವಾರದಂದು ಅಂತ್ಯಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 2.45 ರಿಂದ ರೊಸಾರಿಯೋ ಕ್ಯಾಥೆಡ್ರಲ್ ಚರ್ಚ್ನಲ್ಲಿ ಸಾರ್ವಜನಿಕ ವೀಕ್ಷಣೆ ಹಾಗೂ ಮಧ್ಯಾಹ್ನ 3.30ಕ್ಕೆ ಅಂತ್ಯಸಂಸ್ಕಾರ ನಂತರ ಜೆಪ್ಪು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.