ತೊಕ್ಕೊಟ್ಟು, ಮಾ 01 (DaijiworldNews/SM): ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭ ಲಿಫ್ಟ್ ನಲ್ಲಿ ಸಿಲುಕಿ ಕೇಟರಿಂಗ್ ಸಿಬ್ಬಂದಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟು ಸಮೀಪದಲ್ಲಿ ಭಾನುವಾರದಂದು ನಡೆದಿದೆ. ಕೇಟರಿಂಗ್ ಸಪ್ಲಯರ್ ತುಂಬೆ ನಿವಾಸಿ ಹಂಝ(30) ಮೃತ ವ್ಯಕ್ತಿಯಾಗಿದ್ದಾರೆ.
ಇಲ್ಲಿನ ಕಲ್ಲಾಪುವಿನಲ್ಲಿರುವ ಹಾಲ್ ನಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ಸಂದರ್ಭ ಕೆಟರಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭ ನಡೆಯುತ್ತಿದ್ದ ಸಂದರ್ಭ ಸಾಮಾಗ್ರಿಗಳನ್ನು ರವಾನಿಸುತ್ತಿದ್ದ ವೇಳೆ ಏಕಾಏಕಿಯಾಗಿ ಲಿಫ್ಟ್ ಕೆಟ್ಟು ಹೋಗಿದೆ. ಈ ವೇಳೆ ಆಯಾತಪ್ಪಿ ಬಿದ್ದ ಹಂಝ ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಅವರ ಜೀವ ಉಳಿಸಲಾಗಿಲ್ಲ. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹಾಲ್ ನ ಮಾಲಕರು ಮಾತ್ರ ತಮಗೂ ಘಟನೆಗೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸಿದ್ದಾರೆ ಎಂಬುವುದು ಸ್ಥಳೀಯರ ಆರೋಪವಾಗಿದ್ದು, ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.