ಮಂಗಳೂರು, ಮಾ 01 (DaijiworldNews/SM): ಮಾನವನಿಗೆ ಬೇಕಾದುದು ಪ್ರೀತಿ ವಿಶ್ವಾಸ. ಅದು ಶಾಶ್ವತವಾಗಿ ನೆಲೆ ನಿಲ್ಲಬೇಕು. ಜನರಿಗೆ ಈಗ ಬೇಕಾಗಿರುವುದು ಭಾಷಣವಲ್ಲ, ಕೇವಲ ವಿಚಾರಗಳು ಮಾತ್ರ. ಸಮಾಜಕ್ಕೆ ಸೇವೆ ಮಾಡಿರುವುದನ್ನು ಗುರುತಿಸುವ ಕೆಲಸವನ್ನು ಸ್ಪಾಟ್ ನ್ಯೂಸ್ ಗ್ರೂಪ್ ಮಲ್ಲೂರು ಹಮ್ಮಿಕೊಂಡಿರುವುದು ಶ್ಲಾಘನೀಯ. ಸಮಾಜಕ್ಕೆ ಪೂರಕವಾಗಿ ಸೇವೆ ಮಾಡುವ ಸಂಘಟನೆಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಸ್ಪಾಟ್ ನ್ಯೂಸ್ ಗ್ರೂಪ್ ಮಲ್ಲೂರು ಆಶ್ರಯದಲ್ಲಿ ಭಾನುವಾರ ಮಲ್ಲೂರು ಮೈದಾನದಲ್ಲಿ ನಡೆದ ಮಲ್ಲೂರು ಸಂಭ್ರಮ ಬ್ಯಾರಿ ಕಲರವ 2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸೇವೆ ಮಾಡುವ ಸಂಘಟನೆಗಳಿಗೆ ಟೀಕೆ ಟಿಪ್ಪಣಿ ಇರುವುದು ಸ್ವಾಭಾವಿಕ. ಆದರೆ ಟೀಕೆಯ ಕಡೆ ಗಮನ ಕೊಡದೇ ಸೇವೆ ಮಾಡುವುದರಲ್ಲಿ ನಿರತರಾಗಬೇಕು. ದ್ವೇಷದ ಭಾಷಣ ಮಾಡಿ ನಾಯಕನಾಗುವುದು ಬೇಡ. ಪ್ರೀತಿಯು ಭಾಷಣ ಮಾಡಿ ನಾಯಕನಾದರೆ ಸಾಕಾಗುತ್ತದೆ. ಸಮಾಜದಿಂದ ಒಂದು ಸಮುದಾಯವನ್ನು ಹೊರಗಿಟ್ಟು ಸಂವಿಧಾನ ರಚಿಸುವ ಅಗತ್ಯವಿಲ್ಲ. ಅದಕ್ಕೆ ಅರ್ಥ ಕೂಡ ಇಲ್ಲ ಎಂದು ವಿರೇಂದ್ರ ಹೆಗ್ಗಡೆ ಹೇಳಿದ್ದರು. ಈ ಮಾತು ಎಷ್ಟು ಅರ್ಥ ಪೂರ್ಣವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಂಗಳೂರು ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷ ಅಬ್ದುಲ್ ಸತ್ತಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು. ಭಾರತೀಯ ಸೈನಿಕ ಸುನೀಲ್ ಕುಮಾರ್ ಮಲ್ಲೂರು, ಪೈಲಟ್ ಸಲಾಮತ್ ಅಲಿ ಮುಹಮ್ಮದ್ ಅಕ್ಬರ್ ಮತ್ತು ಗಲ್ಫ್ ಗೈಸ್ ಸೆಂಟ್ರಲ್ ಕಮಿಟಿ ಮಲ್ಲೂರು ಗೆ ಸ್ಪಾಟ್ ನ್ಯೂಸ್ ಅವಾರ್ಡ್ ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಎಂ.ಕೆ. ಯೂಸುಫ್ ಬದ್ರಿಯಾ ನಗರ, ಎನ್.ಇ.ಮುಹಮ್ಮದ್ ಬದ್ರಿಯಾ ನಗರ, ನಿಜಾಮುದ್ದೀನ್ ಚಿಕ್ಕಮಂಗಳೂರು, ಮುಹಮ್ಮದ್ ಶರೀಫ್ ಕಲಾಯಿ, ರಮೇಶ್ ಆಳ್ವ ಕಜೆ, ಉಸ್ಮಾನ್ ಬಡಕಬೈಲ್ ,ಎಂ.ಕೆ.ಅಬ್ದುಲ್ ಲತೀಫ್ ಬದ್ರಿಯಾ ನಗರ, ಶಮೀಮ್ ಕುಟ್ಟಿ ಕಳ ರವರನ್ನು ಗೌರವ ಸನ್ಮಾನ ಮಾಡಲಾಯಿತು. ಗ್ರಾ.ಪಂ.ಸದಸ್ಯರಾದ ಡಿ.ಆಹಮ್ಮದ್ ಆಲಿಯಬ್ಬ ,ಎಂ.ಎಚ್ ಹಸನ್ ಬಾವ ಮಲ್ಲೂರು, ಅಬ್ದುಲ್ಲಾ ಬೊಲ್ಲಂಕಿನಿ ದ.ಕ.ರೇಂಜ್ ಸಮಿತಿ ಉಪಾಧ್ಯಕ್ಷ ಎಂ.ಎ.ಮುಹಮ್ಮದ್ ಉದ್ದಬೆಟ್ಟು ಅವರನ್ನು ವಿಶೇಷ ಸನ್ಮಾನ ಮಾಡಲಾಯಿತು.