ಉಡುಪಿ, ಮಾ 2 (Daijiworld News/MSP): ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ರೈತನೋರ್ವ ಮೃತಪಟ್ಟ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ರೈತನನ್ನು ಪೆರ್ಡೂರು ಗ್ರಾಮದ ಮೂಡು ಜೆಡ್ಡು ಮನೆ ನಿವಾಸಿ ಗುಂಡು ನಾಯ್ಕ್ (58) ಎಂದು ಗುರುತಿಸಲಾಗಿದೆ.
ಮೃತರು ತೋಟ ಹಾಗೂ ಕೃಷಿ ಕೆಲಸ ಮಾಡಿಕೊಂಡಿದ್ದು, ಕೃಷಿಗಾಗಿ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಕೃಷಿಯಲ್ಲಿ ಸರಿಯಾದ ಆದಾಯ ಬಾರದೇ ಇದ್ದುದರಿಂದ ಸಾಲ ತೀರಿಸಲು ಸಾಧ್ಯವಿಲ್ಲದೇ ನೊಂದುಕೊಂಡಿದ್ದು, ಆಗ್ಗಾಗೆ ಸಾಯುವ ಮಾತನಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಫೆ. 28ರ ಬೆಳಿಗ್ಗೆ 9:00 ಗಂಟೆ ಬಳಿಕ ಮನೆಯಲ್ಲಿ ಯಾರೂ ಇಲ್ಲದೇ ಇದ್ದ ಸಮಯ ತನಗಿರುವ ಸಾಲದ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ಗದ್ದೆಗೆ ಹಾಕುವ ಕೀಟ ನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮಾ. ೧ ರಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.