ಮಂಗಳೂರು, ಫೆ 14: ಬೈಕಂಪಾಡಿಯ ಲೆಮಿನಾ ಫ್ಯಾಕ್ಟರಿ ಬಳಿ ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರು ಬಂದರು ಅನ್ಸಾರಿ ನಿವಾಸಿ ಮೊಹಮ್ಮದ್ ಫಹಾದ್ ಹಾಗೂ ಕಂಕನಾಡಿಯ ಮೊಹಮ್ಮದ್ ಆಫ್ರೀದ್ ಬಂಧಿತ ಆರೋಪಿಗಳು. ಫೆ. 11 ರಂದು ಪಶ್ಚಿಮಬಂಗಾಳ ಮೂಲದ ರಾಜು ಎಂಬ ವ್ಯಕ್ತಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹೊಂಡಾ ಸ್ಕೂಟರ್ನಲ್ಲಿ ಬಂದ ಆರೋಪಿಗಳು ರಾಜು ಸರ್ಕಾರ್ ಬಳಿ ಇದ್ದ ಮೊಬೈಲ್ ಹಾಗೂ ಹಣ ಎಗರಿಸಿಕೊಂಡು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ಪಣಂಬೂರು ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಆರೋಪಿಗಳನ್ನು ಕುದುರೆಮುಖ ಬಸ್ಸ್ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡಿದ್ದು , ಕೃತ್ಯಕ್ಕೆ ಬಳಸಿದ್ದ ಒಂದು ಹೊಂಡಾ ಆಕ್ಟೀವಾ ಸ್ಕೂಟರ್ ಹಾಗೂ ಎರಡು ಮೊಬೈಲ್ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.