ಬರ್ವಾನಿ, ಫೆ 14: ಶಿವರಾತ್ರಿ ವೇಳೆ ಪ್ರಸಾದ ರೂಪದಲ್ಲಿ ನೀಡಿದ ಕಿಚಡಿ ಸೇವಿಸಿ ಸಾವಿರದ ಐನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಮಧ್ಯಪ್ರದೇಶದ ಬರ್ವಾನಿಯಲ್ಲಿ ನಡೆದಿದೆ. ಮಹಾಶಿವರಾತ್ರಿ ಹಿನ್ನಲೆಯಲ್ಲಿ ಇಲ್ಲಿನ ಆಶ್ರಮವೊಂದರಲ್ಲಿ ಫೆ. 13 ರ ಮಂಗಳವಾರ ಭಕ್ತರಿಗೆ ಪ್ರಸಾದ ರೂಪದಲ್ಲಿ ಕಿಚಡಿ ನೀಡಲಾಗಿತ್ತು. ಪ್ರಸಾದ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಜನರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಹಲವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಒಂದಷ್ಟು ಮಂದಿ ಖಾಸಗಿ ಆಸ್ಪತ್ರೆಗಳಿಗೂ ದಾಖಲಾಗಿದ್ದಾರೆ. ಇದುವರೆಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ತೇಜಸ್ವಿ ಎಸ್ ನಾಯಕ್ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.