ಕಡಬ, ಮಾ 02 (DaijiworldNews/SM): ಇಲ್ಲಿನ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಭಾನುವಾರದಂದು ನಡೆದ ಅಪಘಾತ ನಡೆದಿದ್ದು ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿದ್ದು ಸಮಗ್ರ ತನಿಖೇ ನಡೆಸುವಂತೆ ಆದೇಶ ನೀಡಿದ್ದಾರೆ.
ಮಾರ್ಚ್ 1ರ ರವಿವಾರದಂದು ಲಾರಿಯಲ್ಲಿ ಮರಳು ತುಂಬಿಸಿಕೊಂಡು ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿತ್ತು. ಅಪಘಾತ ನಡೆದ ಬಳಿಕ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬೇರೆಡೆಗೆ ಕೊಂಡೊಯ್ದು ಮರಳು ಖಾಲಿ ಮಾಡಿಸಿ ಬಳಿಕ ಘಟನೆ ನಡೆದ ರಸ್ತೆಯಲ್ಲಿ ನಿಲ್ಲಿಸಲಾಗಿದೆ. ಹಾಗೂ ಪೋಲಿಸರಿಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿದ್ದು, ಸಾಕ್ಷಿ ನಾಶಕ್ಕೆ ಯತ್ನಿಸಿದ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ದಿನಕರ ಶೆಟ್ಟಿಯವರಿಗೆ ಆದೇಶ ನೀಡಿದ್ದಾರೆ.
ಅಕ್ರಮ ಮರಳು ಸಾಗಾಟದ ಕೇರಳ ನೋಂದಾಣಿಯ ಟೆಂಪೋ(407) ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಟೈಲ್ಸ್ ಅಳವಡಿಸುವ ಕಾರ್ಮಿಕ ರಾಜಸ್ಥಾನ ಮೂಲದ ಸವಾಯ್ ಮಾದ್ಪುರ್ ಜಿಲ್ಲೆಯ ಬಾನಾವಾಸ ತಾಲೂಕಿನ ಲಾಡ್ಪುರಿಯ ನಿವಾಸಿ ಮೇಘರಾಜ ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಪಘಾತ ನಡೆದ ವೇಳೆ ಮಿನಿ ಲಾರಿಯಲ್ಲಿದ್ದ ಮರಳನ್ನು ಖಾಲಿ ಮಾಡಿ ಸಾಕ್ಷಿ ನಾಶ ಮಾಡಲಾಗಿದೆ ಎಂದು ಮೃತರ ಸ್ನೇಹಿತರು ಆರೋಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಆಗಮಿಸಿ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ.