ಮಂಗಳೂರು, ಮಾ.02 (DaijiworldNews/PY) : ಭಾರತೀಯ ಭವಿಷ್ಯ ನಿಧಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ವಯೋನಿವೃತ್ತಿಯನ್ನು ಹೊಂದಿದ ಹಾಗೂ ಹಿರಿಯ ರಂಗಭೂಮಿ ನಟ ಜಗನ್ನಾಥ ಕೆ.(ಜಗ್ಗಣ್ಣ) ಅವರ 60ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ ನಗರದ ಕುಲಶೇಖರದಲ್ಲಿರುವ ಹವ್ಯಾಸಿ ಭಾಗವತ, ರಂಗನಟ ಸುಧಾಕರ್ ಸಾಲಿಯಾನ್ ಅವರ ನಿವಾಸ ಹಂಸಧ್ವನಿಯಲ್ಲಿ ಸರಳವಾಗಿ ನಡೆಯಿತು.
ಸುಧಾಕರ್ ಅವರ ಮಾತೃಶ್ರೀ ನಳಿನಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಶುಭಾರಂಭ ಮಾಡಿದರು. ಈ ಸಂದರ್ಭ 60 ತುಂಬಿದ ಜಗ್ಗಣ್ಣ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಜಗನ್ನಾಥ ಅವರು, ತನಗೆ ಇಷ್ಟು ಪ್ರೀತಿ ತೋರಿದ ಎಲ್ಲರಿಗೂ ಆಭಾರಿಯಾಗಿದ್ದೇನೆ. ಮನುಷ್ಯ ಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡಬೇಕು. ಆತನ ಒಳ್ಳೆಯ ಕೆಲಸಗಳಿಗೆ ಒಂದಲ್ಲ ಒಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ. ಒಳ್ಳೆಯ ಮಿತ್ರರನ್ನು ಪಡೆದುಕೊಳ್ಳುವುದು ಕೂಡಾ ಒಂದು ಸೌಭಾಗ್ಯ ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಅಧಿಕಾರಿ ಹಾಗೂ ಹಿರಿಯ ರಂಗಭೂಮಿ ಕಲಾವಿದ ಲಕ್ಷ್ಮಣ ಕುಮಾರ್ ಮಲ್ಲೂರು, ಕನ್ನಡ ಚಲನಚಿತ್ರ ನಟ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ, ಹಿರಿಯ ರಂಗ ನಟ ಮ್ಯಾಕ್ಸಿಂ ರೋಡ್ರಿಗಸ್, ರಂಗಭೂಷಣದ ಸಂಚಾಲಕ ಶಶಿಭೂಷಣ್ ಕಿಣಿ, ಹವ್ಯಾಸಿ ಯಕ್ಷಗಾನ ಕಲಾವಿದ ಪುಷ್ಪರಾಜ ಕುಕ್ಕಾಜೆ, ಶ್ರೀಲಕ್ಷ್ಮೀಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.
ರಂಗನಿರ್ದೇಶಕ ಕಾಸರಗೋಡು ಚಿನ್ನಾ ಶುಭ ಹಾರೈಸಿ, ಎಲ್ಲರೂ ವಯೋ ನಿವೃತ್ತಿ ಹೊಂದಿದ ಬಳಿಕ ವಿಶ್ರಾಂತ ಜೀವನವನ್ನು ಬಯಸುತ್ತಾರೆ. ಆದರೆ ಜಗನ್ನಾಥ್ ಅವರು ವಿಶ್ರಾಂತಿಯನ್ನು ಪಡೆಯದೇ ತನ್ನ ಮುಂದಿನ ದಿನಗಳಲ್ಲಿ ತಾನು ಬಡವರಿಗೆ ಭವಿಷ್ಯನಿಧಿ ಕುರಿತಾಗಿ ಉಚಿತ ಸಲಹೆ, ಸಹಕಾರವನ್ನು ನೀಡುವುದಾಗಿ ಹೇಳಿರುವುದು ಅವರ ಒಳ್ಳೆಯ ಮನಸ್ಸನ್ನು ತೋರಿಸುತ್ತದೆ. ಅಲ್ಲದೆ ರಂಗಭೂಮಿಯಲ್ಲೂ ತೊಡಗಿಸಿಕೊಳ್ಳುತ್ತೇನೆಂದು ಹೇಳಿರುವುದು ಅವರ ಕ್ರಿಯಾಶೀಲ ಮನಸ್ಸನ್ನು ನಾವು ಅರ್ಥ ಮಾಡಿಕೊಳ್ಳಬಹುದು ಎಂದರು.
ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪುತ್ರಿ ಭೂಮಿ ಪ್ರಾರ್ಥನೆ ಹಾಡಿದರು.