ಉಡುಪಿ, ಮಾ 02 (DaijiworldNews/SM): ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿ ರಾಘವೇಂದ್ರ ಗಾಣಿಗನ ಮೇಲೆ ಪೊಲೀಸರು ದೇಶದ್ರೋಹದ ಕೇಸ್ ಹಾಕಿದ್ದಾರೆ.
ಮಾರ್ಚ್ 2ರ ಸೋಮವಾರ ಬೆಳಗ್ಗೆ ಮಿನಿವಿಧಾನಸೌಧ ಆವರಣದಲ್ಲಿ ಆರೋಪಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದ. ತಕ್ಷಣ ಎಚ್ಚೆತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಹಾಗೂ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು. ಇದೀಗ ಹಲವು ತಾಸುಗಳ ತನಿಖೆಯ ಬಳಿಕ ಆತನ ವಿರುದ್ಧ ದೇಶದ್ರೋಹ ಎಸಗಿರುವ ಕೇಸು ಹಾಕಲಾಗಿದೆ.
ಆರೋಪಿ ಕುಂದಾಪುರದ ಕೋಡಿ ನಿವಾಸಿಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ರಾಘವೇಂದ್ರ ಮೇಲೆ ದೇಶದ್ರೋಹದ ಕೇಸು ಹಾಕಲಾಗಿದೆ. ಘಟನೆ ಬಗ್ಗೆ ಇನ್ನೂ ತನಿಖೆ ಮಾಡಬೇಕು. ರಾಘವೇಂದ್ರನ ಮಾತಿನಲ್ಲಿ ಸ್ಥಿರತೆ ಇಲ್ಲ. ಆತನ ಹಿನ್ನೆಲೆ ಬಗ್ಗೆ ಪರಾಮರ್ಶೆ ನಡೆಸುತ್ತೇವೆ. ಆತನ ಮಾನಸಿಕ ಸ್ಥಿತಿ ಬಗ್ಗೆ ನಾವೇನು ಹೇಳುವುದಿಲ್ಲ. ಮೆಡಿಕಲ್ ರಿಪೋರ್ಟ್ ಬಂದ ಮೇಲೆ ಮಾಹಿತಿ ನೀಡುತ್ತೇವೆ ಎಂದು ಪೊಲೀಸ್ ಹಿರಿಯ ಅಧಿಕಾರಿ ದಾಯ್ಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಪಾಕ್ ಪರ ಘೋಷಣೆ ಕೂಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತ ಮಾನಸಿಕ ಅಸ್ವಸ್ಥ ಎಂದು ಸುದ್ದಿ ಹರಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ. ವೈದ್ಯಕೀಯ ವರದಿ ಸಿಕ್ಕಿದ ಬಳಿಕ ಸ್ಪಷ್ಟಪಡಿಸುವುದಾಗಿ ಇಲಾಖೆ ತಿಳಿಸಿದೆ.