ಕಾಸರಗೋಡು, ಮಾ 02 (DaijiworldNews/SM): ದೇಶದ ಮುಂದಿನ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಿಕ್ಷಣ ವಿದ್ಯಾರ್ಥಿಗಳಿಗೆ ಲಭಿಸಬೇಕಿದೆ ಎಂದು ಕೇರಳ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಹೇಳಿದರು.
ಅವರು ಪೆರಿಯ ಕೇಂದ್ರೀಯ ವಿವಿಯಲ್ಲಿ ಸೋಮವಾರ ನಡೆದ 4ನೇ ಪದವಿಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬದಲಾಗುತ್ತಿರವ ಕಾಲಮಾನಕ್ಕೆ ತಕ್ಕ ಶಿಕ್ಷಣವನ್ನು ಒದಗಿಸುವಲ್ಲಿ ಭಾರತೀಯ ಶಿಕ್ಷಣ ಕ್ರಮ ಪರ್ಯಾಪ್ತವಾಗಿದೆ. ಈ ನಿಟ್ಟಿನಲ್ಲಿ ನಾಳೆಯ ಸಮಾಜಕ್ಕಾಗಿ ಸ್ವಯಂ ನವೀಕರಣಕ್ಕೆ ಪ್ರತಿ ವಿದ್ಯಾರ್ಥಿ ಸಿದ್ಧನಾಗಬೇಕು ಎಂದವರು ತಿಳಿಸಿದರು.
ಸಾಕ್ಷರತೆಯ ಮಟ್ಟ ಹೆಚ್ಚಿದಂತೆ ಸಮಾಜ ಜಾಗೃತಿ ಮತ್ತು ಶಿಕ್ಷಣವನ್ನು ಜನಪರಗೊಳಿಸುವ ನೀತಿ ಅಂತಾರಾಷ್ಟ್ರೀಯ ಮಟ್ಟದ ಉನ್ನತಿಯನ್ನು ಸಾಧಿಸಿದೆ. ಎಲ್ಲರಿಗೂ ಶಿಕ್ಷಣ ಲಭಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಗರಿಷ್ಠ ಮಟ್ಟದ ಯತ್ನ ನಡೆಸುತ್ತಿದೆ. ಇಂದು ಬದಲಾಗಿ ದೇಶದ ಸ್ವಂತ ಸಂವಿಧಾನ ಮತ್ತು ಪರಮಾಧಿಕಾರ ಹೊಂದಿದ್ದೇವೆ. ನಮ್ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿರುವವರಾಗುವುದರ ಜೊತೆಗೆ ಕರ್ತವ್ಯಗಳ ಕುರಿತು ಸದಾ ಎಚ್ಚೆತ್ತುಕೊಂಡವರಾಗಬೇಕು. ಪ್ರತಿಯೊಬ್ಬರೂ ತಮ್ಮತಮ್ಮ ಕರ್ತವ್ಯವನ್ನು ನಡೆಸಿದರೆ ಹಕ್ಕುಗಳು ಸಂರಕ್ಷಣೆಯಾಗುತ್ತವೆ. ಪಠ್ಯ ಪುಸ್ತಕಕ್ಕೆ ಸೀಮಿತವಾಗಿರುವ ಕಲಿಕೆ ಸಮಾಜಕ್ಕೆ, ವ್ಯಕ್ತಿಗೆ ಪ್ರಯೋಜನಕ್ಕೆ ಬಾರದು. ಕಲಿತ ವಿಚಾರಗಳು ಬದುಕಿನಲ್ಲಿ ಬಳಕೆಯಾದಾಗ ಮಾತ್ರ ಜೀವನ ಯಶಸ್ವಿಯಾಗಲು ಸಾಧ್ಯ ಎಂದವರು ವಿವರಿಸಿದರು.
ಸಮಾಜದ ಬಗ್ಗೆ ವಿದ್ಯಾರ್ಥಿಗಳಿಗೆ ಬದ್ಧತೆ ಇರಬೇಕು. ಸಮಾಜದ ಒಗ್ಗಟ್ಟಿನ ಫಲವಾಗಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಕೇಂದ್ರೀಯ ವಿವಿ ವಿದ್ಯಾರ್ಥಿಗಳಿಗೆ ದೊರೆತಿದೆ. ಈ ಹಿನ್ನೆಲೆಯನ್ನು ಜಾಗೃತಿಯಿಂದ ಸದಾ ನೆನಪಿಸಿಕೊಳ್ಳಬೇಕು ಎಂದವರು ಹೇಳಿದರು. ಕೇಂದ್ರಿಯ ವಿವಿಯಲ್ಲಿ ಡಿಸ್ಟಿಂಕ್ಷನ್ ಸಹಿತ ತೇರ್ಗಡೆ ಹೊಂದಿರುವವರಲ್ಲಿ ಶೇ 65 ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ತ್ರಿಶೂರು ಕೃಷಿ ವಿವಿಯಲ್ಲೂ ಡಿಸ್ಟಿಂಕ್ಷನ್ ಸಹಿತ ತೇರ್ಗಡೆಹೊಂದಿರುವವರಲ್ಲಿ ಶೇ 90 ಮಂದಿ ಮತ್ತು ಕೊಚ್ಚಿ ಮೀನುಗಾರಿಕೆ ವಿವಿಯಲ್ಲಿ ಡಿಸ್ಟಿಂಕ್ಷನ್ ಸಹಿತ ತೇರ್ಗಡೆಹೊಂದಿರುವವರಲ್ಲಿ ಶೇ 100 ಮಂದಿ ವಿದ್ಯಾರ್ಥಿನಿಯರೇ ಆಗಿದ್ದಾರೆ. ಇದು ಶಿಕ್ಷಣ ರಂಗದ ಗಮನಾರ್ಹ ಮುನ್ನಡೆ. ಕೇವಲ 11 ವರ್ಷದ ವಯೋಮಾನ ಹೊಂದಿರುವ ಪೆರಿಯ ಕೇಂದ್ರೀಯ ವಿವಿಯಲ್ಲಿ ಇನ್ನೂ ಹೆಚ್ಚಿನ ಔನ್ನತ್ಯ ಗಳಿಕೆ ಸಾಧ್ಯವಿದೆ. ವಿದ್ಯಾರ್ಥಿಗಳ, ಹೆತ್ತವರ ಜೊತೆಗೆ ಸಾರ್ವಜನಿಕ ಬೆಂಬಲವೂ ಈ ನಿಟ್ಟಿನಲ್ಲಿ ಅಗತ್ಯ ಎಂದವರು ಹೇಳಿದರು.