ಕಡಬ ಮಾ 2 (Daijiworld News/MSP): 407 ಟೆಂಪೋ ಹರಿದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ 102 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಭಾನುವಾರದಂದು ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೆಂಪೊ ಚಾಲಕನ ವಿರುದ್ದ ಕಳ್ಳತನ ಮತ್ತು ಸಾಕ್ಷ್ಯನಾಶಕ್ಕೆ ಯತ್ನಿಸಿದ ಪ್ರಕರಣ ದಾಖಲಿಸಲಾಗಿದೆ.
ಅಪಘಾತದ ಸ್ಥಳಕ್ಕೆ ಪೊಲೀಸರು ತಲುಪುವ ಮುಂಚೆ ಟೆಂಪೋದಲ್ಲಿದ್ದ ಮರಳನ್ನು ಸಮೀಪದ ಮನೆಯೊಂದರ ಬಳಿ ಸುರಿದು ಟೆಂಪೋವನ್ನು ಮತ್ತೆ ಅಪಘಾತದ ಸ್ಥಳದಲ್ಲಿ ಇರಿಸಲಾಗಿತ್ತು. ಬಳಿಕ ಟೆಂಪೋದಲ್ಲಿ ಮರಳು ಇರಲಿಲ್ಲ ಎಂಬ ತಪ್ಪು ಮಾಹಿತಿ ಪೊಲೀಸರಿಗೆ ನೀಡಲಾಗಿತ್ತು ಎಂಬ ಆರೋಪ ಚಾಲಕನ ವಿರುದ್ದ ಕೇಳಿ ಬಂದಿತ್ತು.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ತೆಗೆದಿದ್ದ ಪೋಟೋದಲ್ಲಿ ಮರಳು ತುಂಬಿದ್ದದ್ದು ಸ್ಪಷ್ಟವಾಗಿ ಕಂಡುಬರುತ್ತಿತ್ತು. ಈ ಬಗ್ಗೆ ಮೃತರ ಸ್ನೇಹಿತರು ನೀಡಿದ ದೂರಿನ ಹಿನ್ನಲೆಯಲ್ಲಿ ಕಡಬ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದ ದ.ಕ ಎಸ್ ಪಿ ಲಕ್ಷ್ಮೀಪ್ರಸಾದ್ ಅವರು ಟೆಂಪೋ ಚಾಲಕನ ವಿರುದ್ದ ಕಳ್ಳತನ ಮತ್ತು ಸಾಕ್ಷ್ಯನಾಶಕ್ಕೆ ಯತ್ನಿಸಿದ ಪ್ರಕರಣ ದಾಖಲಿಸುವಂತೆ ಹಾಗೂ ಸಮಗ್ರ ವರದಿ ನೀಡುವಂತೆ ಪುತ್ತೂರು ಡಿವೈ ಎಸ್ಪಿ ದಿನಕರ ಶೆಟ್ಟಿ ಅವರೈಗೆ ಆದೇಶಿಸಿದ್ದಾರೆ.