ಉಡುಪಿ, ಮಾ 03 (DaijiworldNews/SM): "ಕಾರಣ ಇಲ್ಲದ ಹಿಂಸಾಚಾರಗಳಲ್ಲಿ ಅಮಾಯಕ ಜನ ಸಾವನ್ನಪ್ಪಿದಾಗ ನೋವಾಗುತ್ತದೆ ಎಂದು ಸಹಬಾಳ್ವೆ ಸಂಘಟನೆಯ ಅಧ್ಯಕ್ಷ್ಯರಾದ ಅಮೃತ್ ಶೆಣೈ ಹೇಳಿದರು.
ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಸಹಬಾಳ್ವೆ ಉಡುಪಿ ವತಿಯಿಂದ ಉಡುಪಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. "ಸಂಸತ್ತಿನಲ್ಲಿ ಯಾವುದೇ ಚರ್ಚೆಯನ್ನು ಮಾಡದೇ ಪೌರತ್ವ ಕಾಯಿದೆಯನ್ನು ಈ ಸರಕಾರ ಜಾರಿಗೆ ತಂದಿದೆ. ಭಾರತದಲ್ಲಿ ಹಲವಾರು ದೇಶಗಳ ವಲಸಿಗರು ಇದ್ದಾರೆ. ಆದರೆ ಈ ಕಾಯಿದೆಯಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ಪೌರತ್ವವನ್ನು ನೀಡುವ ವಿಚಾರ ಇದರಲ್ಲಿ ಇದೆ. ನಮ್ಮ ದೇಶದ ನಿರ್ಮಾತೃರು ಧರ್ಮ ನಿರಪೇಕ್ಷ ದೇಶವನ್ನು ಮಾಡಿದ್ದಾರೆ. ನರೇಂದ್ರ ಮೋದಿಯ ಸರಕಾರ ಒಂದು ಧರ್ಮದವರಿಗೆ ನೋವುಂಟು ಮಾಡಿ ಮತ್ತೊಂದು ಧರ್ಮದವರನ್ನು ಓಲೈಸುವ ಉದ್ದೇಶದಿಂದ ಈ ಕಾಯಿದೆಯನ್ನು ತಂದಿದೆ ಎಂದರು.
ಇನ್ನು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿರುವ ಸಂಧರ್ಭದಲ್ಲಿ ಕಿಡೆಗೇಡಿಗಳು ಪಿಸ್ತೂಲ್ ಹಿಡಿದುಕೊಂಡು ಬರುತ್ತಾರೆ, ಆದರೆ ಪೋಲಿಸರು ಅವರನ್ನು ಬಂಧಿಸುವುದಿಲ್ಲ. ಯಾವುದೇ ರಾಜಕೀಯ ಪಕ್ಷ,ಸಂಘಟನೆಗಳಲ್ಲಿ ಇಲ್ಲದ ಅಮಾಯಕ ಜನ ಇಂತಹ ದಂಗೆಗಳಲ್ಲಿ ಸಾಯುವಾಗ ನೋವಾಗುತ್ತದೆ. ದೆಹಲಿಯಲ್ಲಿ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೋಲಿಸರು ಹಲ್ಲೆ ಮಾಡುವುದನ್ನು ಕಂಡಿದ್ದೇವೆ. ಲೈಬ್ರೆರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗಳನ್ನು ತಳಿಸುತ್ತಾರೆ. ಸಿಸಿಟಿವಿಯನ್ನು ನಾಶ ಪಡಿಸುತ್ತಾರೆ. ಇವತ್ತೂ ಇಡೀ ಪ್ರಪಂಚ ಇದನ್ನು ಕಂಡಿದೆ. ಕೆಲವೇ ದಿನಗಳ ನಂತರ ದೆಹಲಿಯಲ್ಲಿ ಕೋಮು ಗಲಭೆ ಉಂಟಾಗುತ್ತದೆ. ಮಂಗಳೂರಿನ ಗೋಲಿಭಾರ್ ನಲ್ಲಿ ಸತ್ತ ಇಬ್ಬರ ಕುಟುಂಬಗಳಿಗೆ ಮುಖ್ಯಮಂತ್ರಿಗಳು ತಲಾ 25 ಲಕ್ಷ ರುಪಾಯಿ ಪರಿಹಾರವನ್ನು ಘೋಷಿಸಬೇಕು ಎಂದರು.