ಮಂಗಳೂರು, ಮಾ 03 (DaijiworldNews/SM): ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಪ್ರಯಾಣಿಸುವವರನ್ನು ಹೆದ್ದಾರಿಯುದ್ದಕೂ ಕಾಡುತ್ತಿರುವುದು ಟೋಲ್ ಗೇಟ್ ಗಳು. ಒಂದಲ್ಲ ಒಂದು ಟೋಲ್ ಗೇಟ್ ಸವಾರರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ತಲಪಾಡಿ ಟೋಲ್ ಗೇಟ್ ವಾಹನ ಸವಾರರಿಗೆ ಪ್ರಮುಖ ಸಮಸ್ಯೆಯಾಗಿದ್ದರೆ, ಇದೇ ಹೆದ್ದಾರಿಯಲ್ಲಿರುವ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟ್ ಮತ್ತೊಂದು ಸಮಸ್ಯೆಯಾಗಿದೆ. ಈ ಟೋಲ್ ಗೇಟ್ ಈಗಾಗಲೇ ತನ್ನ ಅವಧಿಯನ್ನು ಮುಗಿಸಿದ್ದು, ಅಕ್ರಮವಾಗಿ ಕಾರ್ಯಾಚರಿಸುತ್ತಿದೆ ಎಂಬುವುದು ಹೋರಾಟಗಾರರ ಕೂಗು.
ಐದು ವರ್ಷಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಮತ್ತು ಆರು ತಿಂಗಳ ಅವಧಿಗೆ ಸುಂಕ ವಸೂಲಿ ನಡೆಸುವುದಾಗಿ ಸುರತ್ಕಲ್ ಟೋಲ್ ಕೇಂದ್ರ ಆರಂಭಗೊಂಡಿತ್ತು. ಇದಾದ ವರ್ಷದೊಳಗೆ ಕೇವಲ ಒಂಬತ್ತು ಕಿ.ಮೀ. ಅಂತರದಲ್ಲಿ ಹೆಜಮಾಡಿಯಲ್ಲಿ ಟೋಲ್ ಕೇಂದ್ರ ಆರಂಭಗೊಂಡಿತ್ತು. ಹೆಜಮಾಡಿಯಲ್ಲಿ ಸುಸಜ್ಜಿತ ಕೇಂದ್ರ ಆರಂಭಗೊಂಡು ನಾಲ್ಕು ವರ್ಷಗಳು ಸಂದರೂ ಅಕ್ರಮವಾಗಿ ತಾತ್ಕಾಲಿಕ ನೆಲೆಯಲ್ಲಿ ಆರಂಭಿಸಲಾಗಿದ್ದ ಸುರತ್ಕಲ್ ಟೋಲ್ ಸಂಗ್ರಹಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ. ಇಂದಿಗೂ ಸುರತ್ಕಲ್ ನಲ್ಲಿ ಹೆದ್ದಾರಿ ಹಗಲು ದರೋಡೆ ನಡೆಯುತ್ತಿದೆ.
ಈ ಕುರಿತು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಸತತ ಹೋರಾಟಗಳನ್ನು ನಡೆಸುತ್ತಾ ಬಂದಿದ್ರೂ ಟೋಲ್ ಸಂಗ್ರಹ ಮಾತ್ರ ನಿರಾಯಾಸವಾಗಿ ನಡೆಯುತ್ತಲೇ ಇದೆ. ಪ್ರತಿಭಟನೆಗಳು ತೀವ್ರಗೊಂಡ ಸಂದರ್ಭ 2018 ರಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ, ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ತೀರ್ಮಾನವನ್ನು ಕೈಗೊಂಡಿತ್ತು. ಆದರೆ ತೀರ್ಮಾನ ಕೈಗೊಂಡು ಎರಡು ವರ್ಷ ಸಂದರೂ, ಟೋಲ್ ಗೇಟ್ ತೆರವುಗೊಳಿಸದೆ ಕುಂಟು ನೆಪಗಳನ್ನು ಮುಂದಿಟ್ಟು ತಾತ್ಕಾಲಿಕ ನೆಲೆಯಲ್ಲಿ ಟೋಲ್ ಸಂಗ್ರಹದ ಗುತ್ತಿಗೆಯನ್ನು ನವೀಕರಿಸುತ್ತಾ ಬರಲಾಗಿದೆ.
ಈ ಕುರಿತು ಸ್ಥಳೀಯ ಸಾರ್ವಜನಿಕ ವಾಹನ ಮಾಲಕರ ಸಂಘಟನೆಗಳನ್ನು ರಿಯಾಯತಿ ದರದ ಆಮಿಷವೊಡ್ಡಿ ಮೌನವಾಗಿರಿಸಲಾಗುತ್ತಿದೆ. ಸ್ಥಳೀಯ ಖಾಸಗಿ ವಾಹನಗಳಿಗೆ ಸುಂಕ ವಿನಾಯತಿ ನೀಡಿ ಹೊರ ತಾಲೂಕಿನ ವಾಹನ ಸವಾರರಿಂದ ಅಕ್ರಮವಾಗಿ, ಬಲವಂತದ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಟೋಲ್ ಹೋರಾಟ ಸಮಿತಿ ಆರೋಪಿಸಿದ್ದು, ಟೋಲ್ ಗೇಟ್ ಬಂದ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ಸಾರ್ವಜನಿಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅದಕ್ಕೆ ನಾನು ಬದ್ಧವಾಗಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗುವ ಕಾರ್ಯಗಳನ್ನು ಯಾರು ಕೂಡ ಕೈಗೊಳ್ಳುವಂತಿಲ್ಲ. ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಈ ಹಿಂದೆಯೂ ಫ್ಲೈ ಓವರ್ ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದೆ. ಇದೀಗ ಟೋಲ್ ಗೇಟ್ ಹೆಸರಲ್ಲೂ ತೊಂದರೆ ನೀಡಿದ್ದಲ್ಲಿ ಸುಮ್ಮನಿರಲು ಅಸಾಧ್ಯ ಎಂದಿದ್ದಾರೆ.
ಇನ್ನು ಇಲ್ಲಿನ ಟೋಲ್ ಕೇಂದ್ರದಿಂದಾಗಿ ಪಡುಬಿದ್ರೆ ಉಡುಪಿ ಕಡೆಯಿಂದ ಬರುವ ಖಾಸಗಿ ವಾಹನ ಚಾಲಕರು ಒಂಬತ್ತು ಕಿ.ಮೀ. ಅಂತರದಲ್ಲಿ ಎರಡೆರಡು ಕಡೆ ಟೋಲ್ ಪಾವತಿಸುವ ಅನಿವಾರ್ಯತೆ ಇದ್ದು, ತಮ್ಮ ನೋವು ವ್ಯಕ್ತಪಡಿಸಲಾರದೆ ಅಸಹಾಯಕರಾಗಿದ್ದಾರೆ. ಸಾರ್ವಜನಿಕ ಸಾರಿಗೆಗಳು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಬಸ್ಸು ಮುಂತಾದ ಪ್ರಯಾಣಿಕ ವಾಹನಗಳು ದುಬಾರಿ ಸುಂಕದ ಹೊರೆಯನ್ನು ಪ್ರಯಾಣಿಕರ ತಲೆಯ ಮೇಲೆ ಹಾಕಲು ಯತ್ನಿಸುತ್ತಿವೆ. ಆ ಮೂಲಕ ಈ ಭಾಗದಲ್ಲಿ ನಡೆಸುವ ಪ್ರಯಾಣ ದುಬಾರಿಯಾಗ ತೊಡಗಿದೆ. ಇನ್ನು ಇಲ್ಲಿ ಫಾಸ್ಟ್ ಟ್ಯಾಗ್ ವಿಚಾದರಲ್ಲಿ ಹಲವು ಬಾರಿ ಗಲಾಟೆಗಳು ಕೂಡ ನಡೆದಿವೆ. ಪ್ರಶ್ನಿಸಿದವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ.
ಒಟ್ಟಿನಲ್ಲಿ ಮಂಗಳೂರಿನ ಪಂಪ್ ವೆಲ್ ಸೇತುವೆ ಕಾಮಗಾರಿಯಿಂದ ಹಲವು ರೀತಿಯಲ್ಲಿ ಟೀಕೆ ಟ್ರೋಲ್ ಗೆ ಗುರಿಯಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇದೀಗ ಸುರತ್ಕಲ್ ಟೋಲ್ ಅವ್ಯವಸ್ಥೆಗೆ ಬ್ರೇಕ್ ಹಾಕುವ ಅನಿವಾರ್ಯತೆ ಇದೆ.