ಕಡಬ ಮಾ 4 (Daijiworld News/MSP): ಕಡಬ ಸಮೀಪದ ಬೊಳ್ಳೂರು ಎಂಬಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳಗೆ ಸೇರಿದ ಅಕ್ರಮ ಮರಳು ಸಾಗಾಟ ಲಾರಿ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಕೂಲಿ ಕಾರ್ಮಿಕ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಲತೀಫ್ ನನ್ನು ಮಂಗಳವಾರ ಕಡಬ ಪೊಲೀಸರು ಕೋರ್ಟಿಗೆ ಹಾಜರು ಪಡಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಮಾರ್ಚ್ 16ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣ ಹಿನ್ನಲೆ :
ಭಾನುವಾರದಂದು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಕಡಬದ ಬೊಳ್ಳೂರಿನಲ್ಲಿ ಅಪಘಾತ ಸಂಭವಿಸಿ,ರಾಜಸ್ಥಾನ ಮೂಲದ ಮೇಘರಾಜ್ ಎಂಬವರು ಮೃತಪಟ್ಟಿದ್ದರು. ಲಾರಿ ಚಾಲಕ ಅಕ್ರಮ ಮರಳು ಸಾಗಾಟ ಎಂದು ತಿಳಿಯಬಾರದೆಂದು ಅಪಘಾತ ನಡೆದ ಸ್ಥಳದ ಅನತಿ ದೂರದಲ್ಲಿರುವ ಮನೆಯ ಅಂಗಳದಲ್ಲಿ ಮರಳು ಖಾಲಿ ಮಾಡಿ ಪುನಃ ಲಾರಿಯನ್ನು ಅಪಘಾತವಾದ ಸ್ಥಳಕ್ಕೆ ನಿಲ್ಲಿಸಿದ್ದು ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ನಿನ್ನೆ ಜಿಲ್ಲಾ ಎಸ್.ಪಿ ಲಕ್ಷ್ಮಿಪ್ರಸಾದ್, ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರುಗಳು ಕಡಬ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಸಾಕ್ಷಿ ನಾಶ ಪಡಿಸಿದಕ್ಕೆ ಐ.ಪಿ.ಸಿ ಸೆಕ್ಷನ್ 201 ಹಾಗೂ ಅಕ್ರಮ ಮರಳು ಸಾಗಾಟಕ್ಕೆ ಐ.ಪಿ.ಸಿ ಸೆಕ್ಷನ್ 379 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.