ಕಡಬ, ಮಾ 4 (Daijiworld News/MSP): ಕಡಬ ಆಟೋ ಚಾಲಕ ಮಾಲಕರ ಸಂಘದ ಸದಸ್ಯ, ಆಟೋಚಾಲಕ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ ಶಂಕಿತ ಎಚ್1ಎನ್1 ಜ್ವರದಿಂದಾಗಿ ಮಂಗಳವಾರ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರಾಗಿದ್ದ ಇವರು ಕೆಲವು ಸಮಯಗಳಿಂದ ಕಡಬದಲ್ಲಿ ಆಟೋ ಚಾಲಕನಾಗಿಯೂ ದುಡಿಯುತ್ತಿದ್ದರು. 20 ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು ಮೊದಲು ಕಡಬದಲ್ಲಿ ನಂತರ ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ವಾರದ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಬಳಿಕ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಶಂಕಿತ ಎಚ್1ಎನ್1 ಜ್ವರದಿಂದಾಗಿ ಮೃತಪಟ್ಟಿದ್ದಾರೆಂಬ ಸುದ್ದಿ ಗ್ರಾಮದೆಲ್ಲೆಡೆ ಹಬ್ಬಿದ್ದು, ಈ ಬಗ್ಗೆ ಖಾಸಗಿ ಆಸ್ಪತ್ರೆಯವರೂ ದೃಡೀಕರಿಸಿದ್ದಾರೆ ಎನ್ನಲಾಗಿದೆ.
ಆದರೆ ಜಿಲ್ಲಾ ವೈದ್ಯಾಧಿಕಾರಿ ಡಾ| ಸಿಕಂದರ್ ಪಾಷಾ ಮಾಧ್ಯಮಕ್ಕೆ ಮಾಹಿತಿ ನೀಡಿ ಪ್ರಾಥಮಿಕ ವರದಿ ಪ್ರಕಾರ ಕುಶಾಲಪ್ಪ ಗೌಡ ನ್ಯುಮೋನಿಯಾದಿಂದ ಮೃತಪಟ್ಟಿರುವುದಾಗಿಯೂ, ನ್ಯುಮೋನಿಯಾದಲ್ಲಿಯೂ ಎಚ್1ಎನ್1 ಜ್ವರದ ರೀತಿಯ ಗುಣಲಕ್ಷಣಗಳು ಕಂಡು ಬರುವುದರಿಂದಾಗಿ ಗೊಂದಲ ಉಂಟಾಗಿದೆ. ಪರಿಸರದ ಜನರು ಭಯಪಡಬೇಕಾಗಿಲ್ಲ ಎಂದಿದ್ದಾರೆ. ಆದರೆ ಇದೀಗ ಕಡಬದ ಜನತೆಗೆ ಆತಂಕ ಎದುರಾಗಿದೆ. ಈ ಹಿಂದೆಯೂ ಕೋಡಿಂಬಾಳದ ಮಡ್ಯಡ್ಕ, ಮಜ್ಜಾರು, ಪ್ರದೇಶಗಳಲ್ಲಿ ಜ್ವರ ಬಂದು ಕೆಲವು ಮಂದಿ ಮೃತಪಟ್ಟಿದ್ದರು.ಇದರ ಬಗ್ಗೆ ಆರೋಗ್ಯ ಇಲಾಖೆ ಇನ್ನೂ ಅಧಿಕೃತವಾಗಿ ಈ ಪರಿಸರದ ಜನರ ಆತಂಕ ನಿವಾರಿಸುವ ಕೆಲಸ ಮಾಡಲು ಮುಂದಾಗಿಲ್ಲ ಎಂದು ಸ್ಧಳೀಯರು ಆರೋಪಿಸಿದ್ದಾರೆ.