ಮಂಗಳೂರು, ಮಾ. 04 (Daijiworld News/MB) : ಕರ್ನಾಟಕ ರಾಜ್ಯಾದ್ಯಂತ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬುಧವಾರ ಪರೀಕ್ಷೆ ಆರಂಭವಾಗಿದ್ದು ಇತಿಹಾಸ, ಭೌತಶಾಸ್ತ್ರ, ಮೂಲ ಗಣಿತ ವಿಷಯದ ಪರೀಕ್ಷೆ ನಡೆಯುತ್ತಿದೆ.
ಬೆಳಿಗ್ಗೆ 10:15 ಕ್ಕೆ ಪರೀಕ್ಷೆ ಆರಂಭವಾಗಿದ್ದು ಮಧ್ಯಾಹ್ನ 1:30 ವರೆಗೆ ನಡೆಯಲಿದೆ. ಪರೀಕ್ಷೆಗೆ ಸಂಬಂಧಸಿದಂತೆ ರಾಜ್ಯ ಸರ್ಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಹಾಗೂ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ವೀಕ್ಷಕರು ಗಮನ ಹರಿಸಬೇಕು. ಜಿಲ್ಲೆಗೆ ಯಾವುದೇ ಚ್ಯುತಿ ಬಾರದಂತೆ ಎಚ್ಚರ ವಹಿಸಬೇಕೆಂದು ಉಭಯ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 51 ಕೇಂದ್ರಗಳಲ್ಲಿ 34,346 ವಿದ್ಯಾರ್ಥಿಗಳು ಹಾಗೂ ಉಡುಪಿ ಜಿಲ್ಲೆಯ 27 ಕೇಂದ್ರಗಳಲ್ಲಿ 15,100 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ.
ಪ್ರಮುಖವಾಗಿ ಟ್ರೆಜರಿ, ಇಲಾಖೆ ಹಾಗೂ ಪಿಯು ಬೋರ್ಡ್ನಲ್ಲಿ ಸಿಸಿಟಿವಿ ಅಳವಡಿಲಾಗಿದೆ. ಮೊಬೈಲ್ ಬಳಕೆಯನ್ನು ನಿಷೇಧ ಮಾಡಲಾಗಿದ್ದು ಸೆಂಟರ್ ಕಸ್ಟೋಡಿಯನ್ಗೆ ಮಾತ್ರ ಬೇಸಿಕ್ ಪೋನ್ ಅಥವಾ ಲ್ಯಾಂಡ್ ಲೈನ್ನ್ನು ಮಾತ್ರ ಬಳಸಲು ಅವಕಾಶ ನೀಡಲಾಗಿದೆ.
ಹಾಗೆಯೇ ಪರೀಕ್ಷಾ ಕೇಂದ್ರದ ಸುತ್ತ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.