ಕುಂದಾಪುರ, ಮಾ 4 (Daijiworld News/MSP): ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಧರಾಶಾಹಿಯಾಗುವ ಹಂತದಲ್ಲಿದೆ. ರೀಪುಗಳು ಮುರಿದು ಬೀಳುತ್ತಿವೆ. ಹೆಂಚುಗಳು ಜಾರಿ ಬಿದ್ದಿವೆ. ಹೆಚ್ಚೆಕೆ ಇತ್ತೀಚೆಗೆ ಫ್ಯಾನೇ ಕಳಚಿ ಬಿದ್ದಿದೆ. ಗೋಡೆಯ ಗಾರೆ ಕಳಚಿ ಬೀಳುತ್ತಿವೆ. ಸೂರು ಯಾವಾಗ ಬೀಳುತ್ತದೋ ಎನ್ನುವ ಆತಂಕದಿಂದ ಈ ಠಾಣೆಯೊಳಗೆ ಭಯದಿಂದ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಗಮ ಸಂಚಾರ, ಸಂಚಾರ ನಿಯಂತ್ರಣ ಹೀಗೆ ದಿನವಿಡಿ ಮಳೆ, ಬಿಸಿಲಲಿ ಕೆಲಸ ಮಾಡುವ ಸಂಚಾರ ಪೊಲೀಸರ ಠಾಣೆಗೇ ಸುಸಜ್ಜಿತ ಸೂರು ಇಲ್ಲದಿರುವುದು ಬೇಸರದ ವಿಷಯ.
ಹಿಂದೆ ಸರ್ಕಾರಿ ಬಸ್ ನಿಲ್ದಾಣ ಹತ್ತಿರವಿದ್ದ ಸಂಚಾರ ಠಾಣೆ 2010ರಲ್ಲಿ ಕುಂದಾಪುರ ಪೊಲೀಸ್ ಠಾಣೆ ಇದ್ದ ಈ ಸ್ಥಳಕ್ಕೆ ಸ್ಥಳಾಂತರಗೊಂಡಿತು. ಅಂದು ಸಚಿವರಾಗಿದ್ದ ಡಾ|ವಿ.ಎಸ್ ಆಚಾರ್ಯ ಈ ಸಂಚಾರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ್ದರು. ಅಂದಿನಿಂದಲೂ ಸುಸಜ್ಜಿತ ಕಟ್ಟಡ ಬೇಡಿಕೆ ಇತ್ತು. ಆದರೆ ಈ 19 ಸೆಂಟ್ಸ್ ಸ್ಥಳವನ್ನು ಸಂಚಾರ ಪೊಲೀಸ್ ಠಾಣೆಗೆ ಕಾಯ್ದಿರಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇನ್ನೂ ಕೂಡಾ ಕಟ್ಟಡದ ಬೇಡಿಕೆ ವಿಳಂಬದ ಹಾದಿಯಲ್ಲಿಯೇ ಇದೆ.
ಈ ಸ್ಥಳವನ್ನು ಪೊಲೀಸ್ ಇಲಾಖೆಯ ಸುಪರ್ದಿಗೆ ಕಾಯ್ದಿರಿಸುವ ಪ್ರಕ್ರಿಯೆಗಳು ಮುಗಿದರೆ ತ್ವರಿತವಾಗಿ ಕಟ್ಟಡ ಆಗುತ್ತದೆ ಎನ್ನಲಾಗುತ್ತಿದೆ. ಈ ಪ್ರಕ್ರಿಯೆಗಳು ಮಂದಗತಿಯಲ್ಲಿ ಸಾಗುವುದರಿಂದ ಬೀಳುವ ಹಂತದಲ್ಲಿರುವ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ. ಮಳೆಗಾಲದಲ್ಲಿ ದೊಡ್ಡ ಗಾಳಿ ಬೀಸಿದರೆ ಈ ಕಟ್ಟಡ ಬಿದ್ದರೂ ಅಚ್ಚರಿ ಇಲ್ಲ. ಏಕೆಂದರೆ ಕಟ್ಟಡದ ಆಂತರಿಕ ಸ್ಥಿತಿ ಹಾಗಿದೆ. ಬ್ರಿಟಿಷರ ಕಾಲದ ಈ ಕಟ್ಟಡ ಅಂದಿನಿಂದ ಇಂದಿನ ತನಕ ಹಲವು ಮಹತ್ವದ ಆಡಳಿತ ವ್ಯವಹಾರಗಳ ನಿರ್ವಹಿಸಿತ್ತು. ಈಗಂತೂ ಕಟ್ಟಡ ಗೋಡೆಗಳ ಗಾರೆಗಳು ಕಳಚಿ ಬೀಳುತ್ತಿದೆ. ಗೋಡೆಗೆ ಮಾಡಲಾದ ವಯರಿಂಗ್ ಜೋತಾಡುತ್ತಿವೆ. ಪಕ್ಕಾಸುಗಳಿಗೆ ಗೆದ್ದಲು ಹಿಡಿದಿವೆ. ರೀಪುಗಳು ಮುರಿದು ಬೀಳುತ್ತಿವೆ. ಸಣ್ಣ ಸ್ಲ್ಯಾಬ್ ಕೊಠಡಿ ಸ್ಲ್ಯಾಬ್ಗಳು ಕಳಚಿ ಬಿದ್ದಿವೆ. ಸ್ಲ್ಯಾಬ್ಗೆ ಅಳವಡಿಸಿದ ಸರಳುಗಳು ತುಕ್ಕು ತಗುಲಿ ಹೊರಬಿದ್ದಿವೆ. ಸಾಧ್ಯವಾದಷ್ಟು ದುರಸ್ತಿ ಮಾಡಿದರೂ ಕೂಡಾ ಕಟ್ಟಡ ತಳಮಟ್ಟದಿಂದ ಶಿಥಿಲಗೊಂಡಿರುವುದ ಎಷ್ಟೇ ತೆಪೆ ಹಾಕಿದರೂ ಅಷ್ಟಕ್ಕಷ್ಟೆ.
ಶೌಚಾಲಯಗಳ ಅವಸ್ಥೆ:
ಈ ಕಟ್ಟಡಕ್ಕೆ ಸಂಬಂಧಪಟ್ಟಂತೆ ಇರುವ ಶೌಚಾಲಯಗಳು ತೀರಾ ಹದಗೆಟ್ಟು ಹೋಗಿವೆ. ಫಿಟ್ನ ಸುತ್ತಮುತ್ತ ಹೆಗ್ಗಣಗಳು ಸುರಂಗ ತೊಡಿವೆ. ಶೌಚಾಯಲಕ್ಕೆ ಹೋಗಲು ಆತಂಕದ ಸ್ಥಿತಿ ಇದೆ. ಮಳೆ ಬಂದರೆ ಮಳೆಯ ನೀರು ನೇರ ಶೌಚಾಲಯದ ಫಿಟ್ ಒಳಗೆ ಹೋಗುತ್ತದೆ. ಅಭದ್ರ ಸ್ಥಿತಿಯಿಂದ ದುರ್ನಾತ ಬೀರುತ್ತದೆ. ಒಟ್ಟಾರೆ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.
19ಸೆಂಟ್ಸ್ ಜಾಗ ಕಡಿಮೆಯೇ:
ಈಗ 19 ಸೆಂಟ್ಸ್ ಜಾಗ ಇಲಾಖೆಯ ಸುಪರ್ದಿಯಲ್ಲಿದೆ. ಸುಸಜ್ಜಿತ ಕಟ್ಟಡ ನಿರ್ಮಿಸಿ, ವ್ಯವಸ್ಥಿತ ಠಾಣೆ ಮಾಡಲು ಇನ್ನೂ ಸ್ಪಲ್ಪ ಹೆಚ್ಚುವರಿ ಸ್ಥಳವಕಾಶ ಬೇಕಾಗುತ್ತದೆ. ಸಂಚಾರ ಠಾಣೆಯೆಂದ ಮೇಲೆ ಕೇಸು ಇತ್ಯಾದಿ ವಾಹನಗಳ ನಿಲ್ಲಿಸಲು, ಠಾಣೆಗೆ ಸಂಬಂಧಿಸಿದ ವಾಹನ ನಿಲುಗಡೆಗೆ ಒಂದಿಷ್ಟು ಸ್ಥಳವಕಾಶ ಬೇಕಾಗುತ್ತದೆ ಎನ್ನಲಾಗಿದೆ.
ಇಲಾಖೆಯ ಪ್ರಕಾರ ಕುಂದಾಪುರ ಸಂಚಾರ ಠಾಣೆಯ ಒಟ್ಟು ಹುದ್ದೆಗಳು 41. ಈಗ 11ಹುದ್ದೆಗಳು ಖಾಲಿ ಇವೆ. ಈ ಠಾಣೆಗೆ ಇರುವ ಎರಡು ವಾಹನಗಳು ಸಸೂತ್ರವಾಗಿಲ್ಲ. ಸಂಚಾರ ಪೊಲೀಸರದ್ದು ಅತ್ಯಂತ ಕಷ್ಟದಾಯಕವಾದ ಕೆಲಸ. ಬಿಸಿಲು-ಮಳೆ ಲೆಕ್ಕಿಸದೇ ಕೆಲಸ ಮಾಡಬೇಕು. ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯ ಇರುವುದಿಲ್ಲ. ಟ್ರಾಫಿಕ್ ಪೊಲೀಸರ ಸೇವೆ ಅನನ್ಯವಾದುದು. ಆದರೆ ಯಾರೂ ಕೂಡಾ ಅದನ್ನು ಗಮನಿಸುವುದೇ ಇಲ್ಲ. ಕುಂದಾಪುರ ಠಾಣೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಒಳ್ಳೆಯ ಹೆಸರು ಕುಂದಾಪುರ ಸಂಚಾರ ಠಾಣೆಗೆ ಇದೆ. ಭೌತಿಕವಾಗಿ ಠಾಣೆಯ ಅವಸ್ಥೆ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಎಲ್ಲಾ ಸರ್ಕಾರಿ ಕಛೇರಿಗಳು ಸುಸಜ್ಜಿತವಾಗಿ ಬೆಳೆಯುತ್ತಿರುವಾಗ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಈ ರೀತಿ ದುಸ್ಥಿತಿಯಲ್ಲಿರುವುದು ಕುಂದಾಪುರಕ್ಕೆ ಶೋಭೆಯಲ್ಲ. ಸಂಬಂಧಪಟ್ಟವರು ಅದೆಷ್ಟು ಬೇಗ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಮನಸ್ಸು ಮಾಡಬೇಕಿದೆ.
ವಾಹನಗಳ ನಿಲ್ಲಿಸಲು ಸೂಕ್ತ ಸ್ಥಳವಕಾಶವಿಲ್ಲ
ಅಪರಾಧ ಇತ್ಯಾದಿ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳನ್ನು ನಿಲ್ಲಿಸಲು ಸಂಚಾರ ಠಾಣೆಗೆ ಸ್ವಂತದ್ದಾದ ಸ್ಥಳವಕಾಶವಿಲ್ಲ. ಈಗ ಹೊರ ಭಾಗದಲ್ಲಿ ಇಡಬೇಕಾಗುತ್ತದೆ. ಕೋರ್ಟ್ಗೆ ಸಂಭಂದಿಸಿದ ಸ್ಥಳದಲ್ಲಿ ಇಡಲಾಗುತ್ತದೆ. ಈಗ ಠಾಣೆಯ ಎದುರು ಠಾಣೆಯ ವಾಹನ ಇಡುವುದಕ್ಕೂ ಸಾಕಾಗುವುದಿಲ್ಲ. ಸಂಚಾರ ಠಾಣೆಗೆ ವಾಹನಗಳ ನಿಲ್ಲಿಸಲು ಸೂಕ್ತ ಜಾಗದ ಅವಶ್ಯಕತೆ ಇದೆ.