ಕುಂದಾಪುರ, ಮಾ 4 (Daijiworld News/MSP): ಇಲ್ಲಿನ ಸರ್ಕಾರಿ ಕಚೇರಿಗಳ ಸಂಕೀರ್ಣ ಮಿನಿ ವಿಧಾನಸೌಧದ ಒಳಗೆ ಸೋಮವಾರ ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾ ನಿರಂತರವಾಗಿ ಘೋಷಣೆ ಕೂಗಿದ ಆರೋಪಿ ರಾಘವೇಂದ್ರ ಗಾಣಿಗನಿಗೆ ಮಾರ್ಚ್ 13ರ ವರೆಗೆ ಚಿಕಿತ್ಸೆ ನೀಡುವಂತೆ ಕುಂದಾಪುರ ನ್ಯಾಯಾಲಯ ಆದೇಶಿಸಿದೆ.
ಆರೋಪಿ ಪರ ವಕೀಲ ಜಿ. ಸಂತೋಷ್ಕುಮಾರ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಆತ ಯಾವುದೇ ದುರುದ್ದೇಶವಿಲ್ಲದೇ ಆ ರೀತಿ ವರ್ತಿಸಿದ್ದು, ಪೊಲೀಸರ ಎದುರು ಕೂಡಾ ಅದೇ ರೀತಿ ಕೂಗುತ್ತಿದ್ದ. ಈ ನಿಟ್ಟಿನಲ್ಲಿ ಆತನಿಗೆ ಚಿಕಿತ್ಸೆಯ ಅಗತ್ಯವಿದ್ದು, ಜಾಮೀನು ನೀಡಬೇಕು ಎಂಬುದಾಗಿ ವಾದಿಸಿದ್ದರು.
ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಬುಧವಾರ ಆರೋಪಿ ರಾಘವೇಂದ್ರ ಗಾಣಿಗನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಆರೋಪಿಯನ್ನು ಬುಧವಾರ ಬೆಳಿಗ್ಗೆ ಹಾಜರುಪಡಿಸಿದ್ದರು. ಆರೋಪಿ ಪರ ವಕೀಲರ ವಾದಗಳನ್ನು ಆಲಿಸಿದ ನ್ಯಾಯಾಲಯ ಆರೋಪಿ ರಾಘವೇಂದ್ರನಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಾರ್ಚ್ ೧೩ರ ವರೆಗೆ ಚಿಕಿತ್ಸೆ ನೀಡಿ ವರದಿ ಸಲ್ಲಿಸುವಂತೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಸಂದರ್ಭ ಸೂಕ್ತ ಪೊಲಿಸ್ ಭದ್ರತೆಯನ್ನು ನೀಡುವಂತೆಯೂ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಸೋಮವಾರವೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಾರ್ಚ್ 16ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದರಿಂದ ಆರೋಪಿ ಸಂಬಂಧಿಕರಿಗೆ ರಿಲೀಫ್ ಸಿಕ್ಕಂತಾಗಿದೆ. ಮಾರ್ಚ್ 13ಕ್ಕೆ ಮತ್ತೆ ನ್ಯಾಯಾಲಯದಲ್ಲಿ ಆಸ್ಪತ್ರೆಯ ವೈದ್ಯರ ವರದಿ ಆಧರಿಸಿ ಮುಂದಿನ ತೀರ್ಮಾನಗಳಾಗಲಿವೆ ಎಂದು ತಿಳಿದು ಬಂದಿದೆ.
ಮಾನಸಿಕ ಅಸ್ವಸ್ಥ ಎನ್ನಲಾಗುತ್ತಿರುವ ರಾಘವೇಂದ್ರ ಗಾಣಿಗ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕುಂದಾಪುರದ ಸರ್ಕಾರಿ ಕಚೇರಿಗಳ ಸಂಕೀರ್ಣ ಮಿನಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕೂಗಿದ್ದಾನೆ. ಈ ಸಂದರ್ಭ ಮಾಹಿತಿ ಪಡೆದ ಕುಂದಾಪುರ ತಹಸೀಲ್ದಾರ್ ಲಿಖಿತವಾಗಿ ಆರೋಪಿಯ ವಿರುದ್ದ ದೂರು ನೀಡಿದ್ದು, ಪೊಲೀಸರು ರಾಘವೇಂದ್ರ ಗಾಣಿಗನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಠಾಣೆಯಲ್ಲಿಯೂ ಪಾಕ್ ಪರ ಘೋಷಣೆ ಕೂಗಿದ್ದಲ್ಲದೇ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದಿದ್ದ. ಇತ್ತೀಚೆಗೆ ಅಮೂಲ್ಯ ಮತ್ತು ಆರುದ್ರ ಪ್ರಕರಣವನ್ನು ಟಿವಿ ಮಾಧ್ಯಮಗಳು ನಿರಂತರವಾಗಿ ಪ್ರಸಾರ ಮಾಡಿದ್ದ ಸಂದರ್ಭ ಈತ ನಿರಂತರವಾಗಿ ಟಿವಿ ನೋಡುತ್ತಿದ್ದ. ಪ್ರತೀ ವಾಹಿನಿಯಲ್ಲಿಯೂ ಪಾಕಿಸ್ಥಾನ ಪರ ಘೋಷಣೆಯನ್ನು ನಿರೂಪಕರಾದಿಯಾಗಿ ಹೇಳುತ್ತಿದ್ದರಿಂದ ಪ್ರಭಾವಿತನಾಗಿ ಈತ ಅವಾಂತರ ಸೃಷ್ಟಿಸಿರಬಹುದು ಎನ್ನಲಾಗಿದೆ.
ದೇಶದ್ರೋಹದ ಪ್ರಕರಣ ದಾಖಲು : ಆರೋಪಿ ರಾಘವೇಂದ್ರನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಬಂಧಿತ ಆರೋಪಿಯ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.