ಮಂಗಳೂರು, ಮಾ. 04 (Daijiworld News/MB) : ಮಂಗಳೂರು ಗೋಲಿಬಾರ್ ಹಾಗೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಮ್ಯಾಜಿಸ್ಟ್ರೀರಿಯಲ್ ವಿಚಾರಣೆಯು ನಗರದ ಎಸಿ ಕಚೇರಿ ಕೋರ್ಟ್ನಲ್ಲಿ ನಡೆಯಿತು.
ತನಿಖಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಜಗದೀಶ್ ವಿಚಾರಣೆ ನಡೆಸಿದರು.
ಬುಧವಾರ 176 ಸಾಕ್ಷಿಗಳ ಪೈಕಿ ಎಸಿಪಿಗಳ ಸಹಿತ 29 ಪೊಲೀಸರು ಬಂದು ಸಾಕ್ಷ್ಯ ಹೇಳಿದರು. ಮಾ. 12 ರಂದು ವಿಚಾರಣೆಗೆ ಹಾಜರಾಗುವಂತೆ ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷರಿಗೆ ಹಾಗೂ ಮಾ. 9 ಕ್ಕೆ ಹಾಜರಾಗುವಂತೆ ಡಿಸಿಪಿ ಅರುಣಾಂಶುಗಿರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಾಗೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಮ್ಯಾಜಿಸ್ಟ್ರೀರಿಯಲ್ ತನಿಖೆಯಲ್ಲಿ ಡಿ. 31 ರಂದು ಸ್ಥಳ ಮಹಜರು, ಫೆ.6, ಜ.7, ಫೆ.13 ರಂದು ಸಾರ್ವಜನಿಕ ಲಿಖಿ ಸಾಕ್ಷಿ ಹೇಳಿಕೆ ಹಾಗೂ ವಿಡಿಯೋ ದೃಶ್ವಾವಳಿ ಸಲ್ಲಿಸಲು ಹಾಗೂ ಫೆ. 25 ರಂದು ಪೊಲೀಸರಿಗೆ ಖುದ್ದು ಹಾಜರಾಗಿ ಸಾಕ್ಷಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಕಳೆದ ವರ್ಷ ಡಿ. 19 ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆಯಾಗಿತ್ತು. ಈ ಸಂದರ್ಭದಲ್ಲಿ ನಡೆದ ಗೋಲಿಬಾರ್ನಿಂದಾಗಿ ಇಬ್ಬರು ಬಲಿಯಾಗಿದ್ದರು ಹಾಗೂ ಹಲವರಿಗೆ ಗಾಯವಾಗಿತ್ತು.