ಸುಳ್ಯ ಮಾ.04 (DaijiworldNews/SM): ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಒಂದು ವರ್ಷದ ಹಿಂದೆ ನಿರ್ಮಾಣಗೊಂಡ ಜಿಯೋ ಟವರ್ ಮತ್ತು ಕಳೆದ ಏಳು ತಿಂಗಳ ಹಿಂದೆ ನಿರ್ಮಾಣಗೊಂಡ ಬಿಎಸ್ ಎನ್ ಎಲ್ ಟವರ್ ಇನ್ನೂ ಕಾರ್ಯಾರಂಭಗೊಂಡಿಲ್ಲ. ಇದರಿಂದಾಗಿ, ಅಡ್ತಲೆ ಪ್ರದೇಶದ ಜನತೆ ನೆಟ್ ವರ್ಕ್ ಸಮಸ್ಯೆಯಿಂದ ತೀವ್ರ ಕಂಗೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ನೆಟ್ ವರ್ಕ್ ಮಾತ್ರವಲ್ಲದೆ, ಲ್ಯಾಂಡ್ ಲೈನ್ ಸೌಲಭ್ಯವೂ ಸಮರ್ಪಕವಾಗಿಲ್ಲ. ಇದರಿಂದಾಗಿ ಅಗತ್ಯ ಮತ್ತು ತುರ್ತು ಸಂದರ್ಭಗಳಲ್ಲಿ ತೀವ್ರ ತೊಂದರೆಗಳಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಈ ಪ್ರದೇಶದ ರಸ್ತೆಯು ಕರಾವಳಿಯ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಸುಬ್ರಹ್ಮಣ್ಯ ದೇಗುಲ ಸಂಪರ್ಕಿಸಲು ಇರುವ ಹತ್ತಿರದ ದಾರಿಯಾಗಿದೆ. ದಿನಂಪ್ರತಿ ಇದೇ ದಾರಿಯಾಗಿ ಸಾವಿರಾರು ತೀರ್ಥ ಕ್ಷೇತ್ರ ಯಾತ್ರಿಗಳು ಪ್ರಯಾಣಿಸುತ್ತಾರೆ. ನೆಟ್ವರ್ಕ್ ಸಮಸ್ಯೆಯಿಂದ ಯಾತ್ರಿಕರಿಗೂ ತೊಂದರೆಯಾಗುತ್ತಿದೆ.
ಇಡೀ ದೇಶ ಡಿಜಿಟಲ್ ಸೇವೆಗಳನ್ನು ಪಡೆಯುತ್ತಿದ್ದರೂ ಅಡ್ತಲೆ ಆಸುಪಾಸಿನ ನಾಗರೀಕರು ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ಪಡೆಯುತ್ತಿಲ್ಲ ಎಂದು ತಮ್ಮ ಅಳಲನ್ನು ಸ್ಥಳೀಯ ನಾಗರಿಕರು ತೋಡಿಕೊಂಡಿದ್ದಾರೆ.