ಈಶ್ವರಮಂಗಲ, ಮಾ 5(Daijiworld News/MSP): ಮೆಹಂದಿ ಶಾಸ್ತ್ರ ಮುಗಿಸಿ ವಿವಾಹದ ದಿನದಂದೇ ಬೆಳ್ಳಂಬೆಳಗ್ಗೆ ನಾಪತ್ತೆಯಾಗಿದ್ದ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪುಲ್ಲಾಜೆ ಎಂಬಲ್ಲಿನ ಯುವತಿ ತನ್ನ ಪ್ರಿಯಕರನ ಜತೆ ವಿವಾಹವಾಗಿ ಚಾಮರಾಜ ನಗರದ ಯಳಂದೂರು ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ.
ಕೊಳ್ತಿಗೆ ಗ್ರಾಮದ ಪುಲ್ಲಾಜೆ ನಿವಾಸಿ ಲಕ್ಷ್ಮಣ ನಾಯ್ಕ ಅವರ ಪುತ್ರಿ ನವ್ಯಾ (೨೪) ಫೆ.೨೬ ರಂದು ನಸುಕಿನ ವೇಳೆ ನಾಪತ್ತೆಯಾಗಿದ್ದರು. ನವ್ಯಾ ಅವರ ವಿವಾಹ ಫೆ.26ರಂದು ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಪರ್ಪುಂಜದ ಶಿವಕೃಪಾ ಹಾಲ್ನಲ್ಲಿ ನಿಗದಿಯಾಗಿತ್ತು.
ತನ್ನ ದೂರದ ಸಂಬಂಧಿಕ ಪ್ರಿಯಕರ ಸುಳ್ಯ ತಾಲೂಕಿನ ಕಲ್ಮಡ್ಕದ ನಿವಾಸಿ ನವೀನ್ ಜತೆ ನಾಪತ್ತೆಯಾಗಿದ್ದ ನವ್ಯಾ ಬಳಿಕ ವಿವಾಹವಾಗಿದ್ದರು. ನವ್ಯಾ ಅವರ ವಿವಾಹ ವೆಲ್ಗಾರಿಕಂಡ್ ರಾಜಪುರಂ ಗ್ರಾಮದ ಮುಪ್ಪಿಲಟಾರಿ ನಿವಾಸಿ ನಾರಾಯಣ ನಾಯ್ಕರ ಪುತ್ರ ವಿನೋದ್ ಜತೆ ನಿಗದಿಯಾಗಿತ್ತು. ಹಿಂದಿನ ದಿನ ಮೆಹಂದಿ ಶಾಸ್ತ್ರ ಮುಗಿಸಿ ಮಧ್ಯರಾತ್ರಿ ಮನೆಯಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದರು. ಈ ಬಗ್ಗೆ ನವ್ಯಾಳ ತಂದೆ ಲಕ್ಷ್ಮಣ ನಾಯ್ಕ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.