ಉಡುಪಿ, ಮಾ 5(Daijiworld News/MSP): ಕಾರ್ಕಳದ ಮುನಿಯಾಲು ಗ್ರಾಮದ 75 ವರ್ಷ ವಯಸ್ಸಿನ ಹಿರಿಯ ವೃದ್ದರೊಬ್ಬರು ಮತ್ತವರ ಪತ್ನಿ ಇತ್ತೀಚೆಗೆ ಹತ್ತುದಿನಗಳ ಕಾಲ ಇಸ್ರೇಲ್ ಪ್ರವಾಸ ಮಾಡಿ ಬಂದಿದ್ದರು. ಶೀತ ಭಾದೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ರಾತ್ರಿ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡುವಿನಲ್ಲಿ ದಾಖಲು ಮಾಡಲಾಗಿದೆ. ಅಲ್ಲದೆ ವಯೋಸಹಜವಾಗಿ ರಕ್ತದೊತ್ತಡ, ಮಧುಮೇಹ, ಕಾಯಿಲೆಯಿಂದ ಕೂಡ ಬಳಲುತ್ತಿದ್ದರು. ಉಸಿರಾಟದ ತೊಂದರೆಯೂ ಕೂಡ ಕಂಡು ಬಂದಿದೆ. ಅವರನ್ನು ಇದೀಗ ಪ್ರತ್ಯೇಕ ವಾರ್ಡ್ನಲ್ಲಿ ಗಮನಿಸಲು ಇಡಲಾಗಿದೆ. ಆರೋಗ್ಯ ಚೆನ್ನಾಗಿದೆ ಯಾವುದೇ ಏರುಪೇರು ಕಂಡು ಬಂದಿಲ್ಲ. ಅಲ್ಲದೆ ಅವರ ಪತ್ನಿಗೂ ಯಾವುದೆ ತೊಂದರೆ ಕಾಣಿಸಿಕೊಂಡಿಲ್ಲ.
ಆ ವೃದ್ದ ದಂಪತಿಗಳು ಹತ್ತು ದಿನಗಳ ಕಾಲ ಇಸ್ರೇಲ್ ಪ್ರವಾಸ ಮಾಡಿ ಬಂದಿದ್ದರು. ಆದರೆ ಮೇಲ್ನೋಟಕ್ಕೆ ಯಾವುದೇ ಸೋಕು ತಗುಲಿರುವಂತೆ ಕಾಣುತ್ತಿಲ್ಲ. ಇಂದು ಬೆಳಗ್ಗೆಯಷ್ಟೇ ಅವರ ರಕ್ತದ ಸ್ಯಾಂಪಲ್ ಮತ್ತು ರಕ್ತಸ್ರಾವದ ಮಾದರಿಯನ್ನು ಬೆಂಗಳೂರಿನ ಲ್ಯಾಬ್ಗೆ ಕಳುಹಿಸಲಾಗಿದ್ದು ನಾಳೆ ಅದರ ವರದಿ ಬರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
ಇದೇ ವಿಚಾರವಾಗಿ ಕಾರ್ಕಳದ ಇಬ್ಬರಿಗೆ ಕೊರೋನಾ ಸೋಂಕು ಎಂಬ ಸುಳ್ಳು ಮಾಹಿತಿ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಅಥವಾ ಭಯ ಹುಟ್ಟಿಸುವ ಸಂದೇಶಗಳನ್ನು ರವಾನೆ ಮಾಡಿದ್ದಲ್ಲಿ ಅವರ ಮೇಲೆ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂಧ್ರ ಸೂಡ ಅವರು ದಾಯ್ಜಿ ವಲ್ಡ್ ಗೆ ಮಾಹಿತಿ ತಿಳಿಸಿದ್ದಾರೆ.
ಅಲ್ಲದೆ ಕೊರೋನಾ ವೈರಸ್ ಶಂಕಿತ ಪ್ರಕರಣಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಾರದೆ ಯಾವುದೇ ಮಾಹಿತಿ ಕೊಡದಂತೆ ಡಿಸಿ ಸೂಚನೆ ನೀಡಿದ್ದಾರೆ. ಓರ್ವ ಶಂಕಿತ ಪ್ರಕರಣವಿದ್ದಲ್ಲಿ ಆತನ ಪ್ರವಾಸದ ಹಿನ್ನೆಲೆ, ಕುಟುಂಬದವರ ಆಪ್ತತೆಯ ಹಿನ್ನೆಲೆಯನ್ನು ಮೊದಲು ಗಮನಿಸುತ್ತೇವೆ. ಇದುವರೆಗೆ ಕಾರ್ಕಳದ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣ ವರದಿಯಾಗಿದೆ, ಆಸ್ಟ್ರೇಲಿಯಾ, ದುಬೈ ನಿಂದ ಕಳೆದ ಬಾರಿ ದಾಖಲಾದ ರೋಗಿಗಳಿಗೆ ಹಿನ್ನಲೆಯಿತ್ತು, ಆದರೆ ಇವರೆಲ್ಲರ ಬ್ಲಡ್ ರಿಪೋರ್ಟ್ ನೆಗೆಟಿವ್ ಬಂದಿದೆ.
ಮುಂಜಾಗ್ರತಾ ಕ್ರಮವಾಗಿ ರೈಲ್ವೇ ಸ್ಟೇಷನ್, ಬೀಚ್, ಟೋಲ್ ಗೇಟ್ ಪ್ರವಾಸಿಗರು ಹೆಚ್ಚು ಇಳಿಯುವ ಕಡೆ ಜಾಗೃತಿಯ ಹೋರ್ಡಿಂಗ್ಸ್ ಹಾಕಿದ್ದೇವೆ. ವಿದೇಶೀ ಪ್ರವಾಸದ ಹಿನ್ನೆಲೆಯಿರುವ ಯಾವುದೇ ವ್ಯಕ್ತಿಯೂ ಅನಾರೋಗ್ಯದಿಂದ ಜಿಲ್ಲೆಗೆ ಬಂದಿದ್ದರೆ ಕೂಡಲೇ ಸ್ಥಳೀಯರು, ಸಾರ್ವಜನಿಕರು ಆರೋಗ್ಯ ಇಲಾಖೆಗೆ ತಿಳಿಸಬೇಕು. ಆಗ ಇಲಾಖೆಯೇ ಮುತುವರ್ಜಿ ವಹಿಸಿ ಆಸ್ಪತ್ರೆ ಕರೆತರಲಾಗುತ್ತದೆ ಅಲ್ಲದೆ ಅವರಾಗಿಯೇ ಆಸ್ಪತ್ರೆಗೆ ದಾಖಲು ಮಾಡಬಹುದು ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.