ವರದಿ: ಮೌನೇಶ್ ವಿಶ್ವಕರ್ಮ
ಬಂಟ್ವಾಳ, ಮಾ 5 (Daijiworld News/MSP): ಸಂಚಾರಿ ನಿಯಮಗಳನ್ನು ಎಷ್ಟು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೂ, ನಿಯಮಗಳನ್ನು ಉಲ್ಲಂಘಿಸುವವರಿಗೇನೂ ಕಡಿಮೆ ಇಲ್ಲ. ಇಂತಹಾ ಅಕ್ರಮಗಳಿಗೆ ಕಡಿವಾಣ ಹಾಕಲು ಬಂಟ್ವಾಳದ ನೂತನ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ ಅವರು ಡಿಜಿಟಲ್ ತಂತ್ರಜ್ಞಾನದ ಬಳಕೆಗೆ ಮುಂದಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಏನಿದು ಡಿಜಿಟಲ್ ತಂತ್ರಜ್ಞಾನ..?
ಟ್ಯಾಫಿಕ್ ಪೊಲೀಸರು ರಸ್ತೆ ಬದಿಯಲ್ಲಿ ಕಾದು ಕುಳಿತು ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸುವುದರಿಂದ, ಕೆಲವೊಮ್ಮೆ ಕೆಲ ವಾಹನ ಸವಾರರು ಪೊಲೀಸರ ಕಣ್ಣು ತಪ್ಪಿಸಿಹೋಗುವ ಸಾಧ್ಯತೆ ಇದೆ. ಆಲ್ಲದೆ ಬಲವಂತವಾಗಿ ನಿಲ್ಲಿಸಿದರೆ ಘರ್ಷಣೆಗೂ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಕೈಗೆ ಕ್ಯಾಮೆರಾ, ವಿಡಿಯೋ ಕ್ಯಾಮೆರಾಗಳನ್ನಯ ನೀಡಿ ಆ ಮೂಲಕ ತಪ್ಪಿತಸ್ಥ ರನ್ನು ಪತ್ತೆಹಚ್ಚುವುದು ಜೊತೆಗೆ ರಸ್ತೆಯ ವಿವಿಧೆಡೆಗಳಲ್ಲಿ ಅಳವಡಿಸಲಾದ ಸಿ.ಸಿ.ಕ್ಯಾಮರಾದ ಪೂಟೇಜ್ ಬಳಕೆ ಮಾಡಿ ಆ ಮೂಲಕ ನೋಟೀಸ್ ಜಾರಿ ಮಾಡಿ ದಂಡ ವಸೂಲಿಗೆ ಮುಂದಾಗಿದ್ದಾರೆ.
ತ್ರಿಬಲ್ ರೈಡ್, ಹೆಲ್ಮೆಟ್ ಇಲ್ಲದೆ ಪ್ರಯಾಣ, ಅತಿಯಾದ ವೇಗ ,ಒನ್ ವೇ ಪ್ರಯಾಣ ಮುಂತಾದ ಟ್ರಾಫಿಕ್ ಕಿರಿಕಿರಿ ಉಂಟುಮಾಡುವ ಸವಾರರನ್ನು ಕ್ಯಾಮೆರಾ ಗಳ ಮೂಲಕ ಸೆರೆ ಹಿಡಿದು ಅವರ ಮನೆಗೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ಮಾಡುವುದು ಟ್ರಾಫಿಕ್ ಎಸ್ಐ ರಾಜೇಶ್ ಅವರ ಉದ್ದೇಶ.
10 ದಿನದಲ್ಲಿ 40 ನೋಟೀಸ್ ಜಾರಿ
ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾಧಿಕಾರಿಯಾಗಿ ಅಧಿಕಾರ ಪಡೆದ ಹತ್ತು ದಿನಗಳಲ್ಲಿ ಸಿಬ್ಬಂದಿಗಳ ಕ್ಯಾಮೆರಾ ಹಾಗೂ ಕೆಲವು ಸಿಸಿ ಕ್ಯಾಮರಾಗಳ ಮೂಲಕ ಸುಮಾರು 40 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಟ್ರಾಫಿಕ್ ಸಿಬ್ಬಂದಿ ಗಳ ಮೂಲಕವೇ ಸಂಚಾರ ನಿಯಮ ಪಾಲಿಸದ ಸವಾರರ ಮನೆಗೆ ಹೋಗಿ ಅವರ ಕೈಗೆ ನೇರವಾಗಿ ನೋಟೀಸ್ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಈ ರೀತಿಯಲ್ಲಿ ಕ್ಯಾಮರಾ ಬಳಸಿ ಪ್ರಕರಣ ದಾಖಲಿಸುವುದರಿಂದ ಸ್ಥಳದಲ್ಲಿ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಸಿಬ್ಬಂದಿ ಗಳ ಜೊತೆಗೆ ನಡೆಯುವ ಕಿರಿಕಿರಿ ಕೂಡಾ ತಪ್ಪುತ್ತದೆ ಎಂದು ಅವರ ಯೋಚನೆಯಾಗಿದೆ. ಮುಂದಿನದಿನಗಳಲ್ಲಿ ಕ್ಯಾಮೆರಾ ಹಾಗೂ ಸಿ.ಸಿ.ಕ್ಯಾಮರಾ ಪೂಟೇಜ್ ಗಳ ಅನುಸರಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ಸಂಚಾರಿ ವ್ಯವಸ್ಥೆ ಗಳನ್ನು ಸುಗಮಗೊಳಿಸಲು ಸಾರ್ವಜನಿಕರು ಟ್ರಾಫಿಕ್ ಸಿಬ್ಬಂದಿ ಗಳ ಜೊತೆ ಸಹಕರಿಸಲು ಹಾಗೂ ಸಂಚಾರಿ ನಿಯಮಗಳ ಪಾಲನೆ ಮಾಡವಂತೆ ಅವರು ಮನವಿ ಮಾಡಿದ್ದಾರೆ.
"ಬಂಟ್ವಾಳ ತಾಲೂಕಿನ ಟ್ರಾಫಿಕ್ ಸಮಸ್ಯೆ ನಿವಾರಣೆ ಮತ್ತು ಸಂಚಾರ ನಿಯಮ ಗಳ ಪಾಲನೆ ಸರಿಯಾಗಿ ಅಗಬೇಕಾಗಿದೆ, ಅಮೂಲಕ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣ ಕಡಿಮೆಯಾಗಬೇಕು". - ರಾಜೇಶ್ ಕೆ.ವಿ. ಎಸ್.ಐ. ಸಂಚಾರಿ ಪೊಲೀಸ್ ಠಾಣೆ ಬಂಟ್ವಾಳ