ಮಂಗಳೂರು, ಮಾ 05(DaijiworldNews/SM): ಇತ್ತ ಗುರುವಾರ ಮಂಡನೆಯಾಗಿರುವ ಬಜೆಟ್ ನಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಆದರೆ, ಇದರ ಬೆನ್ನಲ್ಲೇ ಅಕ್ರಮವಾಗಿ ಪೆಟ್ರೋಲ್ ಸಾಗಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ಬಂಧಿಸಲಾಗಿದೆ. ಹಾಗೂ ಆರೋಪಿಗಳಿಂದ ಸುಮಾರು 200 ಲೀಟರ್ ಪೆಟ್ರೋಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳು ಅಕ್ರಮವಾಗಿ ಲಕ್ಷದ್ವೀಪಕ್ಕೆ ಪೆಟ್ರೋಲ್ ಸಾಗಾಟಕ್ಕೆ ಯತ್ನಿಸುತ್ತಿದ್ದರು. ನಗರದ ಕೇಂದ್ರ ಉಪ ವಿಭಾಗದ ಎಸಿಪಿ ಜಗದೀಶ್ ನೇತೃತ್ವದ ತಂಡ ಹಳೆ ಬಂದರು ಧಕ್ಕೆಯಲ್ಲಿ ಸಂಜೆ ಹೊತ್ತು ವಿಶೇಷ ತಪಾಸಣೆ ನಡೆಸುತ್ತಿತ್ತು. ಈ ಸಂದರ್ಭ ಅಕ್ರಮವಾಗಿ ಪೆಟ್ರೋಲ್ ಸಾಗಾಟ ನಡೆಸುತ್ತಿರುವುದು ಕಂಡುಬಂದಿದೆ. ತಕ್ಷಣ ಕಾರ್ಯಪ್ರವೃತರಾದ ಪೊಲೀಸರ ತಂಡ ಆರೋಪಿಗಳು ಹಾಗೂ ಅವರು ರವಾನೆ ಮಾಡುತ್ತಿದ್ದ ಪೆಟ್ರೋಲ್ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಆರೋಪಿಗಳು ಲೈಸನ್ಸ್ ಇಲ್ಲದೆ 200 ಲೀಟರ್ ಪೆಟ್ರೋಲನ್ನು ಕ್ಯಾನ್ನಲ್ಲಿ ತುಂಬಿಸಿ ಸಾಗಾಟ ನಡೆಸಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ವಿವರ ಲಭ್ಯವಾಗಿಲ್ಲ.
ಪಾಂಡೇಶ್ವರ ಪೊಲೀಸರು ತನಿಖೆ ಮುನ್ನಡೆಸಿದ್ದಾರೆ.